ಸಿರವಾರದಲ್ಲಿ ತಹಸೀಲ್ದಾರ್ ಅಶೋಕ ಪವಾರ್‌ಗೆ ಏಮ್ಸ್ ಹೋರಾಟ ಸಮಿತಿ ಸೋಮವಾರ ಮನವಿ ಸಲ್ಲಿಸಿತು.  
ರಾಯಚೂರು

ಏಮ್ಸ್ ನೀಡಿ ಇಲ್ಲ ಪ್ರತ್ಯೇಕ ರಾಜ್ಯ ಘೋಷಿಸಿ

ನರೇಶ್ ಕುಮಾರ್
ಸಿರವಾರ: ರಾಯಚೂರಿಗೆ ಏಮ್ಸ್ ಮಂಜೂರು ಮಾಡಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಏಮ್ಸ್ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಸೋಮವಾರ ತಹಸಿಲ್ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಅಶೋಕ ಪವಾರ್‌ಗೆ ಮನವಿ ಸಲ್ಲಿಸಲಾಯಿತು. 
ಹೋರಾಟ ಸಮಿತಿ ತಾಲೂಕು ಸಂಚಾಲಕ ಎನ್.ಉದಯ ಕುಮಾರ ಸಾಹುಕಾರ್ ಮಾತನಾಡಿ, ರಾಯಚೂರು ನಗರದಲ್ಲಿ ಏಮ್ಸ್ ಹೋರಾಟ ಆರಂಭವಾಗಿ 1500 ದಿನಗಳು ಕಳೆದಿವೆ.  ಹಿಂದಿನ ಬಿಜೆಪಿ ಸರ್ಕಾರ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿತು. ಈಗಿನ ಕಾಂಗ್ರೆಸ್ ಸರ್ಕಾರ ಏಮ್ಸ್ ಮಂಜೂರಾತಿಗೆ ಶಿಫಾರಸು ಮಾಡಿದೆ. ಆದಾಗ್ಯೂ ಕೇಂದ್ರ ಸರ್ಕಾರ ನಿರ್ಲಕ್ಷೃ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಿಂದ ರಾಜ್ಯ ಮತ್ತು ದೇಶಕ್ಕೆ ವಿದ್ಯುತ್, ಅಕ್ಕಿ, ಹತ್ತಿ ಸೇರಿದಂತೆ ಅನೇಕ ರೀತಿಯ ಆದಾಯ ಪಡೆಯುತ್ತಿದೆ. ಇಲ್ಲಿನ ಜನರ ಆರೋಗ್ಯದ ದೃಷ್ಟಿಯಿಂದ ಮತ್ತು ಅಭಿವೃದ್ಧಿಗಾಗಿ ಏಮ್ಸ್ ನೀಡುವಂತೆ ಕೇಳುತ್ತಿದ್ದೇವೆ. ಕೇಂದ್ರ ಸರ್ಕಾರ ನಮ್ಮ ಹೋರಾಟಕ್ಕೆ ಬೆಲೆ ನೀಡುತ್ತಿಲ್ಲ. ಆದ್ದರಿಂದ ಏಮ್ಸ್ ಮಂಜೂರು ಮಾಡಬೇಕು ಇಲ್ಲವೇ ನಮಗೆ ಪ್ರತ್ಯೇಕ ರಾಜ್ಯ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. 
ಪಪಂ ಮಾಜಿ ಅಧ್ಯಕ್ಷ ವೈ.ಭೂಪನಗೌಡ, ನಿಂಬಯ್ಯ ಸ್ವಾಮಿ, ಅಬ್ರಹಾಂ ಹೊನ್ನಟಗಿ, ಕಲ್ಲೂರು ಬಸವರಾಜ ನಾಯಕ, ಎಂ.ಪ್ರಕಾಶಪ್ಪ, ಅಚ್ಚ ಶ್ರೀಶೈಲ, ಎಚ್.ಕೆ.ಶಿವುಗೇನಿ, ರಮೇಶ ದರ್ಶನಕರ್, ಜಿ ವೀರೇಶ ಸಾಹುಕಾರ್, ಚಂದ್ರಶೇಖರ ಸಾಹುಕಾರ್ ನೀಲಗಲ್, ಉಮಾಶಂಕರ ಜೇಗರಕಲ್, ಮೌಲಾಸಾಬ್ ವರ್ಚಸ್, ಪ್ರಕಾಶ ಮಾಡಗಿರಿ, ಬಸವರಾಜ ಭಂಡಾರಿ, ರಮೇಶ ಭೋವಿ, ಶರಣಬಸವ ಮಾರಾಟ, ವೆಂಕಟೇಶ ದೊರೆ, ಹುಲಿಗೆಪ್ಪ ಕರಿಬಿಲ್ಕರ್, ಮೇಶಾಕ್ ಡಿ, ಹೂಗಾರ ಸೂಗಪ್ಪ, ಪರಶುರಾಮ ಸರೋದೆ, ನಾಗರಾಜ ಬೊಮ್ಮನಾಳ, ಶಿವರಾಜ ಗೌಡ ಬೆಳವಿನೂರ, ಫಕ್ರುದ್ದೀನ್ ಮರಡಿ, ಎನ್.ಮಲ್ಲಪ್ಪ  ಇತರರಿದ್ದರು.