ಕವಿತಾಳದ ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿದ ಹಿನ್ನೆಲೆಯಲ್ಲಿ ಕಟ್ಟಡ ಕಾಮಗಾರಿಗೆ ಸಚಿವ ಎನ್.ಎಸ್. ಬೋಸರಾಜು, ಶಾಸಕ ಹಂಪಯ್ಯ ನಾಯಕ ಚಾಲನೆ ನೆರವೇರಿಸಿದರು.
- ಸಚಿವ ಎನ್.ಎಸ್.ಬೋಸರಾಜು ಹೇಳಿಕೆ
- ವಿವಿಧ ಕಾಮಗಾರಿಗಳಿಗೆ ಚಾಲನೆ
ಕವಿತಾಳ: ನನ್ನ ರಾಜಕೀಯ ಜೀವನ ಮಾನ್ವಿ ಕ್ಷೇತ್ರದಿಂದ ಆರಂಭವಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಕಳೆದ 30 ವರ್ಷಗಳಿಂದ ಶ್ರಮಿಸುತ್ತಿದ್ದೇನೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಿದ (30 ಹಾಸಿಗೆಗಳಿಂದ 50ಕ್ಕೆ ಹೆಚ್ಚಳ) ಹಿನ್ನೆಲೆಯಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ ಕೈಗೊಂಡಿರುವ 6.45 ಕೋಟಿ ರೂ. ವೆಚ್ಚದ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಿದರು.
1984ರಲ್ಲಿ ಬಸವರಾಜ ಪಾಟೀಲ್ ಆನ್ವರಿ ವಿರುದ್ಧ ಚುನಾವಣೆಗೆ ನಿಂತಾಗ ಕವಿತಾಳದ ಮತದಾರರು ನನಗೆ ಹೆಚ್ಚು ಮತ ನೀಡಿದ್ದರು. ಎರಡು ಸಲ ಶಾಸಕರನ್ನಾಗಿ ಆಯ್ಕೆ ಮಾಡಿದರು. ನಂತರದಲ್ಲಿ ಹಂಪಯ್ಯ ನಾಯಕಗೆ ಮೂರು ಸಲ ಆಶೀರ್ವದಿಸಿದರು. ಹೀಗಾಗಿ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಕವಿತಾಳ ದೊಡ್ಡ ಪಟ್ಟಣವಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಆಸ್ಪತ್ರೆ ಮೇಲ್ದರ್ಜೆಗೇರಿಸಿದ್ದೇವೆ. ಪಟ್ಟಣದ ನಿವಾಸಿಗಳು ಸಹಕಾರ ನೀಡುವುದರ ಜತೆಗೆ ಗುಣಮಟ್ಟದ ಕಾಮಗಾರಿಯನ್ನು ಮಾಡಿಸಿಕೊಳ್ಳಬೇಕು ಎಂದರು.
ಶಾಸಕ ಹಂಪಯ್ಯನಾಯಕ ಮಾತನಾಡಿದರು. ಡಿಎಚ್‌ಒ ಡಾ.ಸುರೇಂದ್ರ ಬಾಬು, ಟಿಎಚ್‌ಒ ಶರಣಬಸವರಾಜ, ಡಾ.ಗಣೇಶ, ಸಿರವಾರ ಪಪಂ ಅಧ್ಯಕ್ಷ ವೈ. ಭೂಪನಗೌಡ, ಕೆ.ಶರಣಯ್ಯ ನಾಯಕ, ಶರಣು ಸಾಹುಕಾರ ಚಿಂಚರಕಿ, ಶೇಖರಪ್ಪ ಹಟ್ಟಿ, ಚಾಂದ್‌ಪಾಷಾ ತಿಪ್ಪಯ್ಯಸ್ವಾಮಿ, ರಾಜು ಬನ್ನಿಗಿಡದ, ಶಿವಣ್ಣ ಸಿಂಡಿಕೇಟ್ ಸದಸ್ಯ, ಮಾಳಪ್ಪ ಕುರಬರ, ಪಪಂ ಸದಸ್ಯ ಮಲ್ಲಿಕಾರ್ಜುನ ಗೌಡ, ರುಕ್ಮುದ್ದೀನ್, ಸಿದ್ದಣ್ಣ ಸಹುಕಾರ ಹೀರಾ, ಲಿಯಾಕತಲಿ ಸಾಬ್ ಇತರಿರಿದ್ದರು.