ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಸ್ತಪ್ರತಿ ಶಾಸ್ತ್ರ ತರಬೇತಿ ಮತ್ತು ಜಾಗೃತಿ ಶಿಬಿರವನ್ನು ಶಾಸಕ ಆರ್.ಬಸನಗೌಡ ತುರ್ವಿಹಾಳ ಉದ್ಘಾಟಿಸಿದರು.
ಸಿಂಧನೂರು: ಗೆದ್ದಲು ತಿನ್ನುತ್ತಿದ್ದ ವಚನಗಳನ್ನು ಹೊರತಂದು ಇಡೀ ವಿಶ್ವವೇ ಕನ್ನಡ ಸಾಹಿತ್ಯದತ್ತ ತಿರುಗಿ ನೋಡುವಂತೆ ಮಾಡಿದ ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಜೀವನವೇ ಒಂದು ದರ್ಶನ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.
ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗ, ಪುರಂದರದಾಸ ಅಧ್ಯಯನ ಪೀಠ, ಕಾಲೇಜಿನ ಪಿ.ಎಂ.ಉಷಾ ಮತ್ತು ಸಾಂಸ್ಕೃತಿಕ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಹಸ್ತಪ್ರತಿ ಶಾಸ್ತ್ರ ತರಬೇತಿ ಮತ್ತು ಜಾಗೃತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.
ಫ.ಗು.ಹಳಕಟ್ಟಿ ಹಳೆಯ ಕಾಗದಗಳನ್ನು ಸಂರಕ್ಷಿಸಲಿಲ್ಲ. ಕಳೆದುಹೋಗುತ್ತಿದ್ದ ಕನ್ನಡಿಗರ ಆತ್ಮಗೌರವ ಹಾಗೂ ಬಸವಾದಿ ಶರಣರ ಸಮಾನತೆಯ ಆಶಯಗಳಿಗೆ ಮರುಜೀವ ನೀಡಿದರು. ಆಧುನಿಕ ಸಾರಿಗೆ ವ್ಯವಸ್ಥೆಯೇ ಇಲ್ಲದ ಕಾಲದಲ್ಲಿ ಸೈಕಲ್ ಹಾಗೂ ಕಾಲ್ನಡಿಗೆಯಲ್ಲಿ ಊರೂರು ಅಲೆದು ವಚನಗಳನ್ನು ಸಂಗ್ರಹಿಸಿದ ಹಳಕಟ್ಟಿ ಅವರ ಪರಿಶ್ರಮ, ಹಠ ಮತ್ತು ಸೋಲೊಪ್ಪದ ಮನೋಭಾವ ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದರು.
ಹಸ್ತಪ್ರತಿಗಳು ನಮ್ಮ ನಾಡಿನ ಜ್ಞಾನ, ಸಂಸ್ಕೃತಿ ಮತ್ತು ಪರಂಪರೆಯ ಅಮೂಲ್ಯ ಸಂಪತ್ತಾಗಿದ್ದು, ಅವುಗಳ ಮಹತ್ವವನ್ನು ಅರಿತು, ಓದಿ, ಅರ್ಥೈಸಿ ವೈಜ್ಞಾನಿಕವಾಗಿ ಸಂರಕ್ಷಿಸುವ ಹೊಣೆಗಾರಿಕೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಈ ಜ್ಞಾನ ಸಂಪತ್ತನ್ನು ಸುರಕ್ಷಿತವಾಗಿ ವರ್ಗಾಯಿಸುವ ಕಾರ್ಯದಲ್ಲಿ ಯುವಜನರು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಮಾತನಾಡಿ, ಹಸ್ತಪ್ರತಿಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಭಾಗವಾಗಿದ್ದು, ಅವುಗಳನ್ನು ಸಂಗ್ರಹಿಸಿ ಓದಿ ಅರ್ಥೈಸಿಕೊಂಡು ಸಂರಕ್ಷಿಸುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.
ಶಿಬಿರದ ನಿರ್ದೇಶಕ ಹಾಗೂ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಆರ್.ಚನ್ನವೀರಪ್ಪ, ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ, ವಿಜಯಪುರ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ.ಎಂ.ಎಸ್. ಮದಭಾವಿ ಅವರು ಫ.ಗು.ಹಳಕಟ್ಟಿ ಜೀವನ ಮತ್ತು ಸಾಧನೆ ಕುರಿತು ಮಾಹಿತಿ ನೀಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಹೊಸಗೌಡ್ರು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ನಲ್ಲಾ ವೆಂಕಟೇಶ್ವರರಾವ್, ವೀರಭದ್ರಗೌಡ, ಜಹೀರುದ್ದೀನ್ ಸಾಬ್, ಯಂಕಪ್ಪ ಢಣಾಪುರ, ದುರುಗಪ್ಪ, ಸಾಯಿಕುಮಾರ್, ರಾಚಪ್ಪ, ಪ್ರಾಚಾರ್ಯ ಡಾ.ಕೆ.ಖಾದರ್ ಬಾಷಾ, ಡಾ.ಚನ್ನಬಸವ, ತಿಮ್ಮಯ್ಯ ಇದ್ದರು.