ಗುರುಗುಂಟಾದಲ್ಲಿ ಶಂಕ್ರಮ ಅರನೂರು ಅವರು ಸಕ್ಕರೆ ಗೊಂಬೆಗಳನ್ನು ತಯಾರಿಸುತ್ತಿರುವುದು. 
ರಾಯಚೂರು

ಎಲ್ಲೆಡೆ ಮನೆ ಮಾಡಿದೆ ಗೌರಿ ಹಬ್ಬದ ಸಂಭ್ರಮ

ಪ್ರಮುಖ ಮುಖ್ಯಾಂಶಗಳು

  • ಕಲಾಕೃತಿಗಳಲ್ಲಿ ಸಕ್ಕರೆ ಆರತಿ
  • ಸಾಮರಸ್ಯದ ಸಂಕೇತವೇ ಗೌರಿ ಹಬ್ಬ
  • ಸಕ್ಕರೆ ಗೊಂಬೆಗಳ ಬೆಲೆಯೂ ಹೆಚ್ಚಾಗಿದೆ

ಎಲ್ಲೆಡೆ ಮನೆ ಮಾಡಿದೆ ಗೌರಿ ಹಬ್ಬದ ಸಂಭ್ರಮ

ಲಿಂಗಸುಗೂರುಗೌರಿ ಹುಣ್ಣಿಮೆ ಎಂದರೆ ಕಲ್ಯಾಣ ಕರ್ನಾಟಕದ ಮಹಿಳೆಯರಿಗೆ ಎಲ್ಲಿಲ್ಲದ ಸಂಭ್ರಮ. ಮನೆಗಳಲ್ಲಿ ಗೌರಿ ಮೂರ್ತಿ ಪ್ರತಿಷ್ಠಾಪಿಸಿ ಬಗೆಬಗೆಯ ಸಕ್ಕರೆ ಗೊಂಬೆಗಳೊಂದಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿ ಖುಷಿಪಡುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಸಕ್ಕರೆ ಗೊಂಬೆಗಳ ಮಾರಾಟ ಭರದಿಂದ ಸಾಗಿದ್ದು, ವಿವಿಧ ಕಲಾಕೃತಿಗಳಲ್ಲಿ ಸಕ್ಕರೆ ಆರತಿಗಳು ಗಮನ ಸೆಳೆಯುತ್ತಿವೆ. 
ಬಾಯಲ್ಲಿಟ್ಟ ಕೂಡಲೇ ಕರಗುವ ಸಕ್ಕರೆ ಗೊಂಬೆಗಳ ರುಚಿಯೇ ಬೇರೆ. ಆನೆ, ಕುದುರೆ, ನವಿಲು, ರಥ, ಆಂಜನೇಯ, ಲಕ್ಷ್ಮೀ, ಹಂಪಿಗೋಪುರ, ಸೂರ್ಯ, ಚಂದ್ರ ಹೀಗೆ ತರಹೇವಾರಿ ಗೊಂಬೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಬಾಂಧವ್ಯ ವೃದ್ಧಿ, ಸಾಮರಸ್ಯದ ಸಂಕೇತವೇ ಗೌರಿ ಹಬ್ಬ ಆಚರಣೆಯಾಗಿದೆ. 
ಮನೆಗೆ ಹೊಸದಾಗಿ ಸೊಸೆಯಾಗಿ ಬರುವವರಿಗೆ, ಅಕ್ಕ-ತಂಗಿಯರಿಗೆ ಸಕ್ಕರೆ ಆರತಿ ಕೊಟ್ಟು, ಮದುವೆ ಆದವರು ತವರಿಗೆ ಬಂದು ಆರತಿ ಬೆಳಗುವುದು ಹಿಂದಿನಿಂದಲೂ ಬಂದಿರುವ ಸಂಪ್ರದಾಯ. ಕಾರ್ತಿಕ ಮಾಸದ ಹದಿನೈದು ದಿನ ಗೌರಮ್ಮಗೆ ಪೂಜೆ ಸಲ್ಲಿಸಿ ಹುಣ್ಣಿಮೆ ದಿನ ಸಂಪನ್ನಗೊಳಿಸುವ ಗೌರಿ ಹಬ್ಬ ಈ ಭಾಗದ ಜನರ ವಿಶಿಷ್ಟ ಆಚರಣೆ.
ಕಳೆದ 40 ವರ್ಷಗಳಿಂದ ಗೌರಿ ಹುಣ್ಣಿಮೆ ನಿಮಿತ್ತ ಸಕ್ಕರೆ ಗೊಂಬೆಗಳನ್ನು ತಯಾರಿಸುತ್ತಿದ್ದೇವೆ. ತಯಾರಿಕೆಯ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಸಕ್ಕರೆ ಗೊಂಬೆಗಳ ಬೆಲೆಯೂ ಹೆಚ್ಚಾಗಿದೆ. ಲಾಭಗಳಿಸುವ ಉದ್ದೇಶ ಬದಿಗೊತ್ತಿ ಸಂಪ್ರದಾಯದ ಪಾಲನೆಗಾಗಿ ತಯಾರಿಸುತ್ತೇವೆ. ಅಚ್ಚು ಮಾಡುವಾಗ ಗೊಂಬೆಗಳು ಶೇ.10 ಮುರಿಯುತ್ತವೆ. ಹಿರಿಯರು ಆರಂಭಿಸಿದ್ದ ಉದ್ಯೋಗ ಬಿಡಬಾರದು ಎಂದು ವೃತ್ತಿ ಮುಂದುವರೆಸಿದ್ದೇವೆ. ಪ್ರತಿ ಕೆಜಿಗೆ 100 ರೂ.ಯಿಂದ 130 ರೂ. ವರೆಗೆ ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ಸಕ್ಕರೆ ಗೊಂಬೆ ತಯಾರಿಸುವ ಗುರುಗುಂಟಾ ಗ್ರಾಮದ ಶಂಕ್ರಮ್ಮ ಅರನೂರು.