ಗಬ್ಬೂರಿನಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳು. 
ರಾಯಚೂರು

ಗಬ್ಬೂರು ಸಂಸ್ಥಾನ ಭಕ್ತರ ಭೂಕೈಲಾಸ

ನರೇಶ್ ಕುಮಾರ್

ಪ್ರಮುಖ ಮುಖ್ಯಾಂಶಗಳು

  • ವಿನಯ್ ಗುರೂಜಿ ಶ್ಲಾಘನೆ
  • ಸಾಮೂಹಿಕ ವಿವಾಹ ಮಹೋತ್ಸವ
ದೇವದುರ್ಗ: ಬಸವಾದಿ ಶರಣರ ಮಾರ್ಗದಲ್ಲಿ ಸಾಗುತ್ತಿರುವ ಗಬ್ಬೂರಿನ ಬೂದಿಬಸವೇಶ್ವರ ಸಂಸ್ಥಾನವು ಭಕ್ತರ ಪಾಲಿನ ಭೂಕೈಲಾಸವಾಗಿದೆ ಎಂದು ಚಿಕ್ಕಮಗಳೂರು ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಹೇಳಿದರು.
ಗಬ್ಬೂರಿನಲ್ಲಿ ಬೂದಿಬಸವೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ 151 ಜೋಡಿಗಳ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮಾತನಾಡಿದರು. ಆಧುನಿಕ ಯುಗದಲ್ಲೂ ಮಿಣಿ ಇಲ್ಲದೆ ತೇರು ಎಳೆಯುವುದು ಗಬ್ಬೂರಿನಲ್ಲಿ ಮಾತ್ರ ಕಾಣಬಹುದು. ಹಿಂದು-ಮಸ್ಲಿಮರು ಸೇರಿ ಮಾಡುವ ಈ ಜಾತ್ರೆ ಸಾಮರಸ್ಯದ ಸಂಕೇತವಾಗಿದೆ. 
ಧರ್ಮದಲ್ಲಿ ರಾಜಕೀಯ ಇಲ್ಲದೆ ರಾಜಕೀಯ ನಾಯಕರಿಗೇ ಧರ್ಮದ ಬೋಧನೆ ಮಾಡುತ್ತಿದ್ದಾರೆ. ಭಕ್ತರು ಬೂದಿಬಸವೇಶ್ವರನಲ್ಲಿ ಶಿವನನ್ನು ಕಾಣುತ್ತಿದ್ದಾರೆ. ಈ ಭಾಗದಲ್ಲಿ ಸಂಸ್ಕಾರ, ಮಾನವೀಯ ಮೌಲ್ಯಗಳು ಜೀವಂತವಾಗಿವೆ. ಇಂಥ ಮಠಗಳೇ ಇದಕ್ಕೆಲ್ಲ ಕಾರಣ. ಗುರುವಿನ ಸನ್ಮಾರ್ಗದಲ್ಲಿ ಎಲ್ಲರೂ ಮುನ್ನಡೆಯಬೇಕು ಎಂದು ತಿಳಿಸಿದರು.
ಶಿರಹಟ್ಟಿಯ ಮನ್ಮಹಾರಾಜ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಸರ್ಕಾರಗಳು ಮಾಡದ ಕಾಯಕವನ್ನು ಮಠ-ಮಾನ್ಯಗಳು ಮಾಡುತ್ತಿವೆ. ತಾಳಿ, ಕುಂಕುಮ ಮತ್ತು ಕಾಲುಂಗುರಗಳು ಹೆಣ್ಣಿನ ಜವಾಬ್ದಾರಿಯನ್ನು ಹೆಚ್ಚಿಸುವ ಪವಿತ್ರ ವಸ್ತುಗಳೇ ಹೊರತು ಫ್ಯಾಷನ್ ಅಲ್ಲ. ಮಠಗಳು ನಡೆಯುತ್ತಿರುವುದು ರೈತರು ಮತ್ತು ಭಕ್ತರ ಬಲದಿಂದಲೇ ಹೊರತು ಸರ್ಕಾರ ಅಥವಾ ರಾಜಕಾರಣಿಗಳ ಹಣದಿಂದಲ್ಲ ಎಂದರು.
ಬೂದಿಬಸವ ಶಿವಾಚಾರ್ಯರು, ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು, ಸೋಮನಾಥ ಶಿವಾಚಾರ್ಯರು, ಶಂಭು ಸೋಮನಾಥ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಿದ್ದರು. ಸಚಿವ ಡಾ. ಶರಣಪ್ರಕಾಶ ಪಾಟೀಲ್, ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ, ಶಾಸಕರಾದ ಕರೆಮ್ಮ ಜಿ. ನಾಯಕ, ಬಸನಗೌಡ ದದ್ದಲ್, ಡಾ. ಶಿವರಾಜ ಪಾಟೀಲ್, ಶರಣಗೌಡ ಕಂದಕೂರ, ವೇಣುಗೋಪಾಲ ನಾಯಕ, ಪ್ರಮುಖರಾದ ಕೆ. ಶಿವನಗೌಡ ನಾಯಕ, ಬಿ. ವಿ. ನಾಯಕ, ಎ. ವಸಂತಕುಮಾರ್, ಮಾಹಿತಿ ಆಯೋಗದ ಆಯುಕ್ತ ವೆಂಕಟಸಿಂಗ್, ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ ಉಪಸ್ಥಿತರಿದ್ದರು.
"

ಕರ್ನಾಟಕವು ಶಾಂತಿ-ಸಂಸ್ಕೃತಿಯಲ್ಲಿ ಮುಂಚೂಣಿಯಲ್ಲಿರಲು ಮಠಗಳ ಕೊಡುಗೆ ಅಪಾರ. ಬಸವಣ್ಣ ಕಾಯಕ ಮತ್ತು ದಾಸೋಹ ಸಂಸ್ಕೃತಿಯನ್ನು ಮಠಗಳು ಮುಂದುವರಿಸುತ್ತಿವೆ. ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವ ಮೂಲಕ ಪಾಶ್ಚಾತ್ಯ ಸಂಸ್ಕೃತಿಯನ್ನು ಹಿಮ್ಮೆಟ್ಟಿಸಲಾಗುತ್ತಿದೆ. ಗಬ್ಬೂರು ಮಠವು ಲಿಂಗದೀಕ್ಷೆ ನೀಡುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತುತ್ತಿದೆ. 

"

ಗಬ್ಬೂರು ಬೂದಿಬಸವೇಶ್ವರ ಸಂಸ್ಥಾನಮಠವು ತ್ರಿವಿಧ ದಾಸೋಹದೊಂದಿಗೆ ಕಳೆದ 25 ವರ್ಷಗಳಿಂದ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಮೂಲಕ ಬಡವರ ಬಾಳಿಗೆ ಬೆಳಕಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರವು ಮಠದ ಬೂದಿಬಸವ ಶಿವಾಚಾರ್ಯ ಸ್ವಾಮೀಜಿಗೆ ಸಮಾಜಸೇವಾ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು

"

ಬೂದಿಬಸವೇಶ್ವರ ಸಂಸ್ಥಾನವು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಸವಣ್ಣನವರ ತ್ರಿವಿಧ ದಾಸೋಹ ಪರಂಪರೆಯನ್ನು ಮುಂದುವರಿಸುತ್ತಿದೆ. ಕೇಂದ್ರ ಸರ್ಕಾರವು ಬೂದಿಬಸವ ಶ್ರೀಗಳಿಗೆ ಪದ್ಮಶ್ರೀ ಪುರಸ್ಕಾರ ನೀಡಬೇಕು.