ತೈಲ ಬೆಲೆ ಏರಿಕೆ ವಿರೋಧಿಸಿ ಸಿಂಧನೂರಿನನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಬಸವ ಸರ್ಕಲ್‌ನಿಂದ ತಹಸಿಲ್ ಕಚೇರಿವರೆಗೆ ಟ್ರ್ಯಾಕ್ಟರ್‌ನ್ನು ಹಗ್ಗದಿಂದ ಎಳೆದು ಪ್ರತಿಭಟನೆ ನಡೆಸಿತು. ಪ್ರಮುಖರಾದ ಡಿ.ಎಚ್.ಪೂಜಾರ್, ಬಾಷುಮಿಯಾ, ಚಂದ್ರಶೇಖರ ಕ್ಯಾತ್ನಟ್ಟಿ, ಡಿ.ಎಚ್.ಕಂಬಳಿ, ರಮೇಶ ಪಾಟೀಲ್ ಬೇರ‌್ಗಿ, ಚಂದ್ರಶೇಖರ ಗೊರೇಬಾಳ, ಬಸವಂತರಾಯಗೌಡ ಇತರರಿದ್ದರು. 
ರಾಯಚೂರು

ಇಂಧನ ದರ ಏರಿಕೆ, ಟ್ರ್ಯಾಕ್ಟರ್‌ಗೆ ಹಗ್ಗ ಕಟ್ಟಿ ಎಳೆದು ಪ್ರತಿಭಟನೆ

ಸಿಂಧನೂರು: ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಬೆಲೆ ಇಳಿಕೆ ಮಾಡಬೇಕೆಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಶುಕ್ರವಾರ ಬಸವ ಸರ್ಕಲ್‌ನಿಂದ ತಹಸಿಲ್ ಕಚೇರಿವರೆಗೆ ಟ್ರಾೃಕ್ಟರ್‌ಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ಪ್ರತಿಭಟನೆ ನಡೆಸಿದರು. 
ಇಂಧನ, ಎಲ್‌ಪಿಜಿ ಗ್ಯಾಸ್ ಹಾಗೂ ದಿನಬಳಕೆ ವಸ್ತುಗಳ ಬೆಲೆಗಳನ್ನು ತಕ್ಷಣವೇ ಇಳಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಡೀಸೆಲ್, ಪೆಟ್ರೋಲ್ ಮೇಲೆ ವಿಧಿಸುವ ಸುಂಕ ಮತ್ತು ತೆರಿಗೆ ಕಡಿತಗೊಳಿಸಬೇಕು. ರಸಗೊಬ್ಬರ ಬೆಲೆ ಏರಿಕೆ ತಡೆಗಟ್ಟಬೇಕು. ಮುಂಗಾರು ಕೃಷಿ ಚಟುವಟಿಕೆಗಳು ಆರಂಭವಾಗಿರುವುದರಿಂದ ರೈತರ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ, ಬಿತ್ತನೆ ಬೀಜ ಪೂರೈಸಬೇಕು. ಕಾಳಸಂತೆಯಲ್ಲಿ ಮಾರಾಟವಾಗದಂತೆ ಕ್ರಮವಹಿಸಬೇಕು. 
ಸಾಗಣೆ ಮತ್ತು ಸಾರಿಗೆ ವೆಚ್ಚ ತಗ್ಗಿಸಲು ಟೋಲ್‌ಗೇಟ್‌ಗಳಲ್ಲಿ ವಾಹನಗಳಿಗೆ ವಿಧಿಸುವ ಶುಲ್ಕ ಕಡಿತಗೊಳಿಸಬೇಕು. ಪೆಟ್ರೋಲಿಯಂ ಮತ್ತು ಎಲ್‌ಪಿಜಿ ಗ್ಯಾಸ್ ದೇಶೀಯ ಉತ್ಪಾದನೆ, ಆಮದು ಮತ್ತು ವಿತರಣೆಯನ್ನು ಖಾಸಗಿ ಕಂಪನಿಗಳಿಗೆ ವಹಿಸದೆ ಸರ್ಕಾರವೇ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು. 
ಅಮೆರಿಕ ದೇಶದ ನಿರ್ಬಂಧಗಳಿಗೆ ಭಾರತವು ತಲೆಬಾಗದೆ ಕಡಿಮೆ ಬೆಲೆ ಮತ್ತು ಯಾವುದೇ ಷರತ್ತುಗಳಿಲ್ಲದೆ ತೈಲ ಪೂರೈಸುವ ದೇಶಗಳಿಂದ ಅಗತ್ಯಕ್ಕೆ ತಕ್ಕಷ್ಟು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ರಸಗೊಬ್ಬರವನ್ನು ಆಮದು ಮಾಡಿಕೊಳ್ಳಬೇಕು. ತೈಲ ಪೂರೈಕೆ ಬಿಕ್ಕಟ್ಟಿಗೆ ಕಾರಣವಾಗಿರುವ ಇರಾನ್ ಮೇಲೆ ಇಸ್ರೇಲ್-ಅಮೆರಿಕ ಆಕ್ರಮಣವನ್ನು ಖಂಡಿಸಬೇಕು. ಶಾಂತಿ ಒಪ್ಪಂದಕ್ಕಾಗಿ ಭಾರತ ಸಾಧ್ಯವಾದ ಪ್ರಯತ್ನಗಳನ್ನು ಮಾಡಬೇಕೆಂದು ಆಗ್ರಹಿಸಿದರು.
ಪ್ರಮುಖರಾದ ಡಿ.ಎಚ್.ಪೂಜಾರ್, ಬಾಷುಮಿಯಾ, ಚಂದ್ರಶೇಖರ ಕ್ಯಾತ್ನಟ್ಟಿ, ಡಿ.ಎಚ್.ಕಂಬಳಿ, ರಮೇಶ ಪಾಟೀಲ್ ಬೇರ‌್ಗಿ, ಚಂದ್ರಶೇಖರ ಗೊರೇಬಾಳ, ಬಸವಂತರಾಯಗೌಡ, ಚಿಟ್ಟಿಬಾಬು ಬೂದಿವಾಳಕ್ಯಾಂಪ್, ದೇವೇಂದ್ರಗೌಡ ಸಮುದಾಯ, ಬಸವರಾಜ ಎಕ್ಕಿ, ಮಂಜುನಾಥ ಗಾಂಧಿನಗರ, ಎಂ.ಗೋಪಾಲಕೃಷ್ಣ, ವಿರುಪಮ್ಮ, ನಾಗರಾಜ್ ಪೂಜಾರ್ ಇದ್ದರು.