ಜನತಾಪುರ ಗ್ರಾಮದಲ್ಲಿ ತೊಗರಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು.
ಮುದಗಲ್: ತೊಗರಿ ಬೆಳೆಯುವ ರೈತರು ಮಣ್ಣು ಪರೀಕ್ಷೆಯಿಂದ ಬೆಳೆ ಕಟಾವುವರೆಗೆ ಹಂತಹಂತವಾಗಿ ಪೋಷಕಾಂಶ ನೀಡುವ ಮೂಲಕ ಬೇಸಾಯದ ವೆಚ್ಚ ತಗ್ಗಿಸಬೇಕು ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿವಿಯ ಉಪನ್ಯಾಸಕ ಡಾ.ವಿಶ್ವನಾಥ ನಾಯ್ಕ ಹೇಳಿದರು.
ಜನತಾಪುರ ಗ್ರಾಮದಲ್ಲಿ ರಾಯಚೂರು ಕೃಷಿ ವಿವಿಯ ರಿವಾರ್ಡ್ ಯೋಜನೆಯಡಿ ಭಾನುವಾರ ಹಮ್ಮಿಕೊಂಡಿದ್ದ ತೊಗರಿ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.
ತೊಗರಿಯಲ್ಲಿ ಪೋಷಕಾಂಶಗಳ ನಿರ್ವಹಣೆ ಜತೆಗೆ ಕುಡಿ ಚಿವುಟುವುದು, ಪಲ್ಸ್ ಮ್ಯಾಜಿಕ್ ಬಳಕೆಯ ವಿಧಾನ ಮತ್ತು ಸಮಗ್ರ ಕೀಟ ರೋಗ ನಿರ್ವಹಣೆ ಮಾಡಬೇಕು. ಭೂಮಿಯಲ್ಲಿನ ಗುಣಮಟ್ಟದ ಕೊರತೆ ಇರುವ ಪೋಷಕಾಂಶಗಳನ್ನು ಗಮನಿಸಿ ರೈತರು ಸಮಗ್ರ ಪೋಷಕಾಂಶಗಳ ನಿರ್ವಹಣೆಗೆ ಆದ್ಯತೆ ನೀಡಬೇಕು.
ಬೆಳೆಯಲ್ಲಿ ಪ್ರಾಥಮಿಕ ಸಂಸ್ಕರಣೆಗೆ ಆದ್ಯತೆ ನೀಡಬೇಕು. ಎಲ್‌ಆರ್‌ಐ ಕಾರ್ಡ್‌ಗಳ ರೈತರಿಗೆ ಸಮಗ್ರ ಪೋಷಕಾಂಶಗಳ ಮಾಹಿತಿ ಒದಗಿಸುವುದರಿಂದ ಕೃಷಿ ವೆಚ್ಚ ಕಡಿಮೆ ಮಾಡಲು ಸಹಾಯಕವಾಗುತ್ತದೆ. ಕೃಷಿಯಲ್ಲಿ ಮಣ್ಣು ಮತ್ತು ನೀರು ಮುಖ್ಯ ಪಾತ್ರವಹಿಸುತ್ತವೆ. ಆದ್ದರಿಂದ ರೈತರು ಮಣ್ಣು ಸಂರಕ್ಷಣಾ ತಂತ್ರಜ್ಞಾನಗಳನ್ನು ಅನುಸರಿಸಬೇಕು ಎಂದರು.
ಲಿಂಗಸುಗೂರು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥೆ ಡಾ.ವಾಣಿಶ್ರೀ ಎಸ್. ಮಾತನಾಡಿದರು. ಕೃಷಿ ಇಲಾಖೆ ಉಪನಿರ್ದೇಶಕ ಮುತ್ತುರಾಜ, ರೈತ ಶರಣಪ್ಪ ತೊಗರಿ ಇತರರಿದ್ದರು.