ಎಸ್ಪಿ ಅರುಣಾಂಗ್ಶು ಗಿರಿ 
ರಾಯಚೂರು

ಅಕ್ರಮ ಚಟುವಟಿಕೆ ಐದು ಜನರ ಗಡಿಪಾರು

ರಾಚಯ್ಯ ಸ್ವಾಮಿ
ರಾಯಚೂರು
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಕ್ರಮ ಮಟ್ಕಾ, ಜೂಜಾಟ, ಸೇಂಧಿ ಹಾಗೂ ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ 5 ಜನ ಆರೋಪಿಗಳನ್ನು ಗಡಿಪಾರು ಮಾಡಿ ಲಿಂಗಸುಗೂರು ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿ ಆದೇಶ ಹೊರಡಿಸಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ತಿಳಿದರು.

ಗುರುವಾರ ಪತ್ರಿಕಾ ಪ್ರಕರಣೆ ನೀಡಿದ ಅವರು, ಮಸ್ಕಿ ತಾಲೂಕಿನ ಬಳಗಾನೂರು ಪೊಲೀಸ್ ಠಾಣೆ ವ್ಯಾಪ್ತಿಯ ನಂಜಲದಿನ್ನಿ ಗ್ರಾಮದ ವ್ಯಕ್ತಿಯ ವಿರುದ್ಧ ಮಟ್ಕಾ ಸೇರಿದಂತೆ 14 ಪ್ರಕರಣಗಳು ದಾಖಲಾಗಿದ್ದು, ಆರೋಪಿಯನ್ನು ವಿಜಯಪುರ ಜಿಲ್ಲೆಯ ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಮಸ್ಕಿ ತಾಲೂಕಿನ ತುರ್ವಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಧನೂರು ತಾಲೂಕಿನ ಜಂಬುನಾಥಹಳ್ಳಿ ಗ್ರಾಮದ ವ್ಯಕ್ತಿಯ ವಿರುದ್ಧ ಮಟ್ಕಾ ಸೇರಿದಂತೆ ವಿವಿಧ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕೆ 24 ಪ್ರಕರಣಗಳು ದಾಖಲಾಗಿವೆ. ಆರೋಪಿಯನ್ನು ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.

ತುರ್ವಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ಕಣ್ಣೂರು ಗ್ರಾಮದ ನಿವಾಸಿಯ ವಿರುದ್ಧ ಮಟ್ಕಾ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಕ್ಕೆ 26 ಪ್ರಕರಣಗಳು ದಾಖಲಾಗಿದ್ದು, ಆರೋಪಿಯನ್ನು ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ರಾಯಚೂರು ತಾಲೂಕಿನ ಕಾಕನಗೇರಿ ಗ್ರಾಮದ ನಿವಾಸಿಯ ವಿರುದ್ಧ ಮಟ್ಕಾ ಸೇರಿದಂತೆ 8 ಪ್ರಕರಣಗಳು ದಾಖಲಾಗಿದ್ದು, ಆರೋಪಿಯನ್ನು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಿಂತಕಿ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.

ರಾಯಚೂರು ನಗರದ ಮಂಗಳವಾರ ಪೇಟೆ ನಿವಾಸಿಯ ವಿರುದ್ಧ ಸೇಂಧಿ ಹಾಗೂ ಗಾಂಜಾ ಪ್ರಕರಣಗಳಲ್ಲಿ ಭಾಗಿಯಾಗಿದ್ದಕ್ಕೆ 9 ಪ್ರಕರಣಗಳು ದಾಖಲಾಗಿದ್ದು, ಆರೋಪಿಯನ್ನು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಿಂತಕಿ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆಮದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.