- - ಸರ್ವಾಧ್ಯಕ್ಷರನ್ನಾಗಿ ಡಾ.ಗಂಗಮ್ಮ ಸತ್ಯಂಪೇಟೆ ಆಯ್ಕೆ
ರಾಯಚೂರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ಘಟಕಗಳ ಸಹಯೋಗದಲ್ಲಿ ಜೂ.20 ರಂದು ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಪ್ರಥಮ ಕದಳಿ ಮಹಿಳ ಸಮ್ಮೇಳನವನ್ನು ಆಯೋಜಿಸಲಾಗಿದೆಂದು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಲಲಿತಾ.ಎಂ.ಬಸನಗೌಡ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನ ಸರ್ವಾಧ್ಯಕ್ಷರನ್ನಾಗಿ ಡಾ.ಗಂಗಮ್ಮ ಸತ್ಯಂಪೇಟೆ ಅವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನದಂದು ರಾಷ್ಟ್ರಧ್ವಜವನ್ನು ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಬಸಪ್ಪ. ಎಂ.ತಿಪ್ಪಾರೆಡ್ಡಿ ಆರೋಹಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲಕ್ಷ್ಮೀದೇವಿ ಶಾಸ್ತ್ರಿ, ಜಗದೇವಿ ಚನ್ನಬಸವ, ಡಾ.ಎಂ.ಭಾರತಿ, ಡಾ.ಶೀಲಾ ಸಗರದ, ಕೆ.ಇ.ನರಸಿಂಹ ಭಾಗಿಯಾಗಲಿದ್ದಾರೆ.
ಬೆಳಗ್ಗೆ 9 ಗಂಟೆಗೆ ಬಸವೇಶ್ವರ ವೃತ್ತದಿಂದ ಪ್ರಾರಂಭವಾಗುವ ಸಮ್ಮೇಳನಾಧ್ಯಕ್ಷ ಮೆರವಣಿಗೆಯನ್ನು ಜಿಲ್ಲಾಧಿಕಾರಿ ಪೂವಿತಾ.ಎಸ್.ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆಯ ಆಡಳಿತಾಧಿಕಾರಿ ಸಂತೋಷ ರಾಣಿ, ರೇಖಾ ಕೇಶವರೆಡ್ಡಿ, ವಿಜಯರಾಜೇಶ್ವರಿ ಗೋಪಿಶೆಟ್ಟಿ, ನಂದಾ ಶಿವಾನಂದಚುಕ್ಕಿ, ಅನ್ನಪೂರ್ಣ ಮೇಟಿ, ಪ್ರೇಮಲತಾರೆಡ್ಡಿ ಭಾಗವಹಿಸಲಿದ್ದಾರೆ.
ಸಮ್ಮೇಳನವನ್ನು ಬೆಂಗಳೂರು ಮಹಾರಾಣಿ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕಿ ಡಾ.ಎಂ.ಎಸ್.ಆಶಾದೇವಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ ವಹಿಸಲಿದ್ದಾರೆ. ಹೊಸ ಕೃತಿಗಳನ್ನು ಕದಳಿ ವೇದಿಕೆ ಸಂಚಾಲಕಿ ಸುಶೀಲ ಸೋಮಶೇಖರ ಬಿಡುಗಡೆಗೊಳಿಸಲಿದ್ದಾರೆ. ಲಲಿತಾ ಬಸನಗೌಡ ಇವರ ಅನುಭಾವ ಗೀತೆ ಮತ್ತು ಎಚ್.ಜಿ.ಹಂಪಣ್ಣ ಇವರು ರಚಿಸಿದ ಲಿಂಗಜ್ಯೋತಿ ಹಡಪದ ಲಿಂಗಯ್ಯ ಕೃತಿಗಳು ಬಿಡುಗಡೆಯಾಗಲಿವೆ ಎಂದರು.
ನಂತರ ಮೂರು ಗೋಷ್ಟಿಗಳು ನಡೆಯಲಿವೆ. ಮೊದಲಗೋಷ್ಠಿ ಜಿಲ್ಲೆಯ ವಚನಕಾರ್ತಿಯರು, ಎರಡನೇ ಗೋಷ್ಠಿ ಶರಣರ ವಚನಗಳಲ್ಲಿ ಸ್ವಾತಂತ್ರ್ಯದ ಹೊಳಪು, ಮೂರನೇ ಗೋಷ್ಠಿ ಅಧುನಿಕ ವಚನ ವಾಚನ ನಡೆಯಲಿದೆ ಎಂದರು.
ಸಂಜೆ 5.30ಕ್ಕೆ ಸಮಾರೋಪ ಸಮಾರಂಭನಡೆಯಲಿದೆ. ಅಧ್ಯಕ್ಷತೆಯನ್ನು ಲಲಿತಾ ಬಸನಗೌಡ ವಹಿಸಲಿದ್ದಾರೆ. ಸಮಾರೋಪ ನುಡಿಗಳನ್ನು ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಶಿವಾನಂದ ಕೆಳಗಿನಮನೆ ನುಡಿಯಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಸ್ಸಪ್ಪ ತಿಪ್ಪಾರೆಡ್ಡಿ, ನಾಗರಾಜ ಮಸ್ಕಿ, ಅಂಬಾಪತಿ ಪಾಟೀಲ್, ಡಾ.ಸರ್ವಮಂಗಳ ಸಕ್ರಿ, ಡಾ.ರೇಖಾ ಪಾಟೀಲ್ ಇದ್ದರು.