ಮಾನ್ವಿ ತಾಲೂಕಿನ ರಬ್ಬಣಕಲ್ ಗ್ರಾಮದಲ್ಲಿ ಭಾನುವಾರ ಕುಡಿವ ನೀರಿನ ಕೆರೆಗೆ ಸಚಿವ ಎನ್.ಎಸ್.ಬೋಸರಾಜು ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ಹಂಪಯ್ಯನಾಯಕ, ಮುಖ್ಯಾಧಿಕಾರಿ ಪರಶುರಾಮ್ ದೇವಮಾನೆ ಇದ್ದರು.
ಮಾನ್ವಿ: ತುಂಗಭದ್ರಾ ಎಡದಂಡೆ ಕಾಲುವೆ ಮುಖಾಂತರ ಕುಡಿವ ನೀರಿನ ಕೆರೆಗೆ ನೀರು ಹರಿಸಲಾಗುತ್ತಿದೆ. ಕೆರೆ ಭರ್ತಿ ನಂತರ ನೀರು ವ್ಯರ್ಥ ಮಾಡದೆ ಬೇಸಿಗೆಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ತಾಲೂಕಿನ ರಬ್ಬಣಕಲ್ ಗ್ರಾಮದಲ್ಲಿ ಭಾನುವಾರ ಕುಡಿವ ನೀರಿನ ಸಂಗ್ರಹ ಕೆರೆಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಬೇಸಿಗೆ ಸಮಯದಲ್ಲಿ ಜನರಿಗೆ ಕುಡಿವ ನೀರಿನ ತೊಂದರೆಯಾಗದಂತೆ ಕೆರೆಗಳನ್ನು ತುಂಬಿಸಿಕೊಳ್ಳುವುದಕ್ಕಾಗಿ ಸರ್ಕಾರ ತುಂಗಭದ್ರಾ ಜಲಾಶಯದ ಎಡದಂಡೆ ಮುಖ್ಯ ಕಾಲುವೆ ಮೂಲಕ ನೀರು ಹರಿಸುತ್ತಿದೆ. ರಬ್ಬಣಕಲ್ ಕುಡಿವ ನೀರಿನ ಕೆರೆ 12.5 ಮೀಟರ್ ಆಳವಿದ್ದು, 15 ಎಂಎಲ್‌ಬಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಈಗ ಕೆರೆಯಲ್ಲಿ ಕೇವಲ 6 ಮೀ. ನೀರಿನ ಸಂಗ್ರಹವಿದ್ದು, ಇನ್ನಾರು ಮೀಟರ್‌ವರೆಗೆ ನೀರನ್ನು ತುಂಬಿಸಿಕೊಳ್ಳಬೇಕು. ಇದರಿಂದ ಪಟ್ಟಣದ 27 ವಾರ್ಡ್ ಜನರಿಗೆ ಕುಡಿವ ನೀರು ತಲುಪಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶಾಸಕ ಹಂಪಯ್ಯ ನಾಯಕ ಮಾತನಾಡಿ, ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆರೆ ಭರ್ತಿ ಮಾಡಿಕೊಂಡು, ಸಮರ್ಪಕವಾಗಿ ಕುಡಿವ ನೀರಿನ ನಿರ್ವಹಣೆ ಮಾಡಬೇಕು ಎಂದರು. ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಗಫೂರ್‌ಸಾಬ್, ಮುಖಂಡರಾದ ರುದ್ರಪ್ಪ ಅಂಗಡಿ, ಸೈಯದ್ ಖಾಲಿದ್‌ಖಾದ್ರಿ, ನರಸಪ್ಪ ರಬ್ಬಣಕಲ್, ಸತ್ತಾರ್ ಬಂಗ್ಲೆವಾಲೇ, ಕನಕಪ್ಪ ಯಾದವ್, ಮುಖ್ಯಾಧಿಕಾರಿ ಪರಶುರಾಮ್ ದೇವಮಾನೆ ಇತರರಿದ್ದರು.