ಪಾಮನಕಲ್ಲೂರು ಮುಖ್ಯ ರಸ್ತೆಯಲ್ಲಿ ಮಳೆನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು.
- ಪಾಮನಕಲ್ಲೂರು ಗ್ರಾಮದಲ್ಲಿ ಸುರಿದ ಮಳೆ
- ಕವಿತಾಳ ವಾಹನ ಸಂಚಾರಕ್ಕೆ ತೊಂದರೆ
ಕವಿತಾಳ: ಸಮೀಪದ ಪಾಮನಕಲ್ಲೂರು ಗ್ರಾಮದಲ್ಲಿ ಸುರಿದ ಮಳೆಗೆ ಬೆಳಗಾವಿ-ಹೈದರಾಬಾದ್ ಮುಖ್ಯರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.
ಇದರಿಂದ ಮಳೆಯ ನೀರು ಸಮರ್ಪಕವಾಗಿ ಹರಿಯದೆ ರಸ್ತೆಯ ಮೇಲೆ ಹರಿಯುವಂತ ಪರಿಸ್ಥಿತಿ ನಿರ್ಮಾಣವಾಯಿತು. ರಸ್ತೆಯಲ್ಲಿ ಅಲ್ಲಲ್ಲಿ ತಗ್ಗು-ದಿಬ್ಬಗಳಿರುವುದರಿಂದ ನೀರಿನಲ್ಲಿ ಕಾಣದೇ ಜೀವಭಯದಲ್ಲೇ ಸಂಚರಿಸಬೇಕಾಯಿತು. ರಸ್ತೆಯಲ್ಲಿ ನಿಲ್ಲುವ ಮಳೆನೀರು ಗ್ರಾಮದ ಹಳ್ಳಕ್ಕೆ ಹರಿದುಹೋಗಲು ಚರಂಡಿ ಇದೆ.
ಆದರೆ, ಚರಂಡಿಯಲ್ಲಿ ಹೂಳು ತುಂಬಿರುವುದರಿಂದ ನೀರು ಸಮರ್ಪಕವಾಗಿ ಹರಿಯುತ್ತಿಲ್ಲ. ಅಲ್ಲದೆ, ಮಳೆಬಂದಾಗ ರಸ್ತೆ ಪಕ್ಕದ ಜಮೀನುಗಳಲ್ಲಿ ನೀರು ಭರ್ತಿಯಾಗಿ ರಸ್ತೆಗೆ ಬರುವುದರಿಂದ ಸಂಚಾರಕ್ಕೆ ಸಮಸ್ಯೆ ಎದುರಾಗಿದ್ದು, ಇದು ಗ್ರಾಪಂ ನಿರ್ಲಕ್ಷ್ಯ ಎಂಬ ಮಾತು ಕೇಳಿಬಂದಿದೆ.
ಈ ಕುರಿತು ಗ್ರಾಮದ ಪ್ರಮುಖ ನಾಗಲಿಂಗಪ್ಪ ಛಲವಾದಿ ಶಾಸಕ ಆರ್.ಬಸನಗೌಡ ತುರ್ವಿಹಾಳಗೆ ಚರಂಡಿಯ ಹೂಳು ಮತ್ತು ಚರಂಡಿಗೆ ಅಡ್ಡ ಹಾಕಿದ ಮಣ್ಣನ್ನು ತೆಗೆಯಬೇಕು ಎಂದು ಮನವಿ ಮಾಡಿದ್ದರು. ಆಗ ಶಾಸಕರು ಪಿಡಿಒ ಮಲ್ಲಯ್ಯಗೆ ಕ್ರಮಕ್ಕಾಗಿ ಸೂಚಿಸಿದ್ದರು. ಆದರೆ, ಈವರೆಗೆ ಈ ಕೆಲಸ ಆಗಿಲ್ಲ. ಶೀಘ್ರವೇ ಪರಿಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಬಗ್ಗೆ ಪಿಡಿಒ ಮಲ್ಲಯ್ಯ ಪ್ರತಿಕ್ರಿಯಿಸಿ, ಚರಂಡಿ ಸ್ವಚ್ಛಗೊಳಿಸಲು ಸಿಬ್ಬಂದಿಗೆ ಸೂಚಿಸಿರುವೆ. ಗ್ರಾಮಕ್ಕೆ ತೆರಳಿ ಪರಿಶೀಲಿಸುವೆ ಎಂದರು.
ಅವೈಜ್ಞಾನಿಕ ಕಾಮಗಾರಿ: ಕವಿತಾಳ ಪಪಂ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಕಾಮಗಾರಿ ಆಗಿರುವುದರಿಂದ ಮಳೆ ನೀರು ಅಂಗಡಿಗಳಿಗೆ ನುಗ್ಗಿ ಅಂಗಡಿಯವರು ಪರದಾಡುವಂತಾಯಿತು. ಹುಲಿಗುಡ್ಡದ ಹಳ್ಳವು ತುಂಬಿದ ಪರಿಣಾಮ ಅಮೀನಗಡದಿಂದ ನೆಲಕೋಳ, ಕಾಚಪೂರ, ಯತಗಲ್, ಹಟ್ಟಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ತಾಸಿಗೂ ಹೆಚ್ಚು ಸಮಯ ಜಲಾವೃತಗೊಂಡಿತ್ತು. ನೀರು ಕಡಿಮೆಯಾದ ನಂತರ ವಾಹನ ಸವಾರರು ಪ್ರಯಾಣ ಬೆಳೆಸಿದರು. ಹತ್ತಿಯನ್ನು ನಾಟಿಮಾಡಿದ ರೈತರ ಭೂಮಿಯಲ್ಲಿ ಮಳೆ ನೀರು ನಿಂತು ಕವಿತಾಳ, ಅಮೀನಗಡ, ವಟಗಲ್, ಹಣಗಿ, ಚಿಂಚರಕಿ ರೈತರು ನಾಟಿ ಹಾಳಾಗುವ ಆತಂಕದಲ್ಲಿದ್ದಾರೆ.