ಕೆ.ಹಂಚಿನಾಳಕ್ಯಾಂಪ್ ಬಳಿಯ ಮುಖ್ಯ ಹೆದ್ದಾರಿ ಬಳಿ ಸಂಚಾರ ತಡೆ ನಡೆಸಿ ರೈತರು ಪ್ರತಿಭಟನೆ ನಡೆಸಿದರು. ಶಾಸಕ ಹಂಪನಗೌಡ ಬಾದರ್ಲಿ, ತಹಸೀಲ್ದಾರ್ ಅರುಣ್ ದೇಸಾಯಿ, ಬಿಜೆಪಿ ಮುಖಂಡ ಕೆ.ಕರಿಯಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಸಿಂಧನೂರು ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಇತರರಿದ್ದರು.
- ಉಪಕಾಲುವೆ
- ಹರಿಸಲು
- ಮುಖ್ಯ ಹೆದ್ದಾರಿ
ಸಿಂಧನೂರು: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಮೂಲಕ 32ನೇ ಉಪಕಾಲುವೆ ಕೊನೆಯ ಭಾಗದ ರೈತರಿಗೆ ಸಮರ್ಪಕ ನೀರು ಪೂರೈಕೆ ಮಾಡಬೇಕೆಂದು ಒತ್ತಾಯಿಸಿ ನೂರಾರು ಸಂಖ್ಯೆಯ ರೈತರು ಶನಿವಾರ ಕೆ.ಹಂಚಿನಾಳಕ್ಯಾಂಪ್ ಬಳಿ ಮುಖ್ಯ ಹೆದ್ದಾರಿಯಲ್ಲಿ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
32ನೇ ಉಪಕಾಲುವೆ ವ್ಯಾಪ್ತಿಯ ರೌಡಕುಂದ, ಬಂಗಾರಿಕ್ಯಾಂಪ್, ರಾಮಾಕ್ಯಾಂಪ್, ಲಕ್ಷ್ಮೀಕ್ಯಾಂಪ್, ಅಂಬಾನಗರಕ್ಯಾಂಪ್, ಸೋಮಲಾಪುರ, ಗೊಬ್ಬರಕಲ್, ಗಜಲಕ್ಷ್ಮೀಕ್ಯಾಂಪ್ ಹಾಗೂ ಸಿದ್ರಾಂಪುರ ವ್ಯಾಪ್ತಿಯ ಜಮೀನುಗಳಿಗೆ ಇದುವರೆಗೆ ನೀರು ಹರಿಸಿಲ್ಲ. ಮೇಲ್ಭಾಗದಲ್ಲಿಯೇ ಯಥೇಚ್ಛವಾಗಿ ನೀರು ಹರಿಯುತ್ತಿದ್ದು ಇದರಿಂದ ಕೆಳ ಭಾಗಕ್ಕೆ ನೀರು ಹರಿಯುತ್ತಿಲ್ಲ. ಕಳೆದ ಹದಿನೈದು ದಿನಗಳಿಂದೆಯೇ ನೀರು ಬಿಟ್ಟಿದ್ದರೂ ಹನಿ ನೀರು ಬಂದಿಲ್ಲ. ಇದಕ್ಕೆ ನೀರಾವರಿ ಅಧಿಕಾರಿಗಳೇ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದರು.
ಎಂಎಲ್‌ಸಿ ಎನ್.ರವಿಕುಮಾರ, ಬಿಜೆಪಿ ಮುಖಂಡ ಕೆ.ಕರಿಯಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಕಳೆದ ವಾರದಿಂದ 32ನೇ ಉಪಕಾಲುವೆ ಕೊನೆಯ ಭಾಗಕ್ಕೆ ನೀರಿಲ್ಲದೆ ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ತೊಂದರೆಯಾಗಿದ್ದು ಕೂಡಲೇ ನೀರು ಹರಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.
ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಹಂಪನಗೌಡ ಬಾದರ್ಲಿ, ರೈತರನ್ನು ಸಮಜಾಯಿಷಿ, ಕೂಡಲೇ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಇತ್ಯಾರ್ಥಗೊಳಿಸುವ ಭರವಸೆ ನೀಡಿದರೂ, ಅಧಿಕಾರಿಗಳು ನೀರು ಹರಿಸುವಲ್ಲಿ ವಿಫಲರಾಗಿದ್ದು ಪ್ರತಿಭಟನೆ ಬಿಟ್ಟು ಮೇಲೆಳುವುದಿಲ್ಲ ಎಂದರು. ಕೊನೆಗೆ ಶಾಸಕರು ತುರ್ತಾಗಿ ಕೆಳ ಭಾಗಕ್ಕೆ ನೀರು ಹರಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿ, ಗೇಜ್ ಪ್ರಕಾರವೇ ನೀರು ಹರಿಸಲಾಗುವುದು. ಮುಂದಿನ ವಾರದಿಂದ ವಾರಬಂಧಿ ಪ್ರಕಾರ ನೀರು ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಹಸೀಲ್ದಾರ್ ಅರುಣ್ ದೇಸಾಯಿ, ಸಿಂಧನೂರು ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಜಿಪಂ ಮಾಜಿ ಸದಸ್ಯ ಬಸವರಾಜ ಹಿರೇಗೌಡ್ರ, ಎನ್.ಭೀಮನಗೌಡ, ರಂಗನಗೌಡ, ಸಿಂಹಾದ್ರಿ, ಹಾಜುಂಪಾಷಾ, ಜಾವೀದ್ ತುರಕಟ್ಟಿ, ಶರಣಪ್ಪ, ಮಾಬುಸಾಬ, ಮಹಾಂತೇಶ ಹಿರೇಗೌಡ್ರ, ಗೊರೇಬಾಳ, ಸೋಮಲಾಪುರ ಗ್ರಾಪಂ ವ್ಯಾಪ್ತಿಯ ನೂರಾರು ರೈತರು ಭಾಗವಹಿಸಿದ್ದರು.