ದೇವದುರ್ಗ ತಾಲೂಕು ಪರ್ತಾಪುರ ಗ್ರಾಮದಲ್ಲಿ ಸುರಿದ ಆಲಿಕಲ್ಲು ಮಳೆಗೆ ಭತ್ತದ ಬೆಳೆ ಹಾಳಾಗಿ ಕಾಳು ಉದುರಿರುವುದು ಹಾಗೂ ದೇವದುರ್ಗ ತಾಲೂಕು ಜೇರಬಂಡಿ ಗ್ರಾಮದಲ್ಲಿ ಆಲಿಕಲ್ಲು ಮಳೆ ಬಿದ್ದಿರುವುದು.
- ಭತ್ತ, ಮೆಣಸಿನಕಾಯಿ ಬೆಳೆಗೆ ಹಾನಿ
- ದೇವದುರ್ಗ ಅಕಾಲಿಕ ಆಲಿಕಲ್ಲು ಮಳೆ
ದೇವದುರ್ಗ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಮಂಗಳವಾರ ತಡರಾತ್ರಿ ಸುರಿದ ಅಕಾಲಿಕ ಹಾಗೂ ಆಲಿಕಲ್ಲು ಮಳೆಯಿಂದ ವಿವಿಧೆಡೆ ಕಾಳುಕಟ್ಟಿದ್ದ ಭತ್ತ, ಸಜ್ಜೆ ಹಾಗೂ ಒಣಗಲು ಹಾಕಿದ್ದ ಮೆಣಸಿನಕಾಯಿ ಹಾನಿಯಾಗಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ.
ಗೌರಂಪೇಟೆ, ದೇವರಗುಂಡಗುರ್ತಿ, ಜೇರಬಂಡಿ, ನಗರಗುಂಡ, ಪರ್ತಾಪುರ, ಡಿ.ಕರಡಿಗುಡ್ಡ, ಗೂಗಲ್, ಕೋಣಚಪ್ಪಳಿ, ಜೋಳದಹೆಡಗಿ ಸೇರಿ ವಿವಿಧ ಭಾಗದಲ್ಲಿ ತಡರಾತ್ರಿ ಆಲಿಕಲ್ಲು ಸಹಿತ ಮಳೆಯಾಗಿದೆ. ಇದರಿಂದ ಕಾಳುಕಟ್ಟಿದ್ದ ಭತ್ತ ನೆಲಕ್ಕುರುಳಿದ್ದು, ಆಲಿಕಲ್ಲು ರಭಸಕ್ಕೆ ಕವಳೆ ಕಾಳುಗಳು ಉದುರಿವೆ. ಇನ್ನು ಜಮೀನಿನಲ್ಲಿ ಒಣಗಲು ಹಾಕಿದ್ದ ಕೆಂಪು ಮೆಣಸಿನಕಾಯಿ ರಾಶಿಗೆ ನೀರು ನುಗ್ಗಿ ಹಾನಿಯಾಗಿದೆ. ಮಳೆಗೆ ಮೆಣಸಿನಕಾಯಿ ತೊಯ್ದರೆ ಕಂದುಬಣ್ಣಕ್ಕೆ ತಿರುಗಲಿದ್ದು, ಬೆಲೆ ಕುಸಿಯುವ ಆತಂಕವಿದೆ.
ಎರಡ್ಮೂರು ದಿನಗಳಿಂದ ತಾಲೂಕಿನಲ್ಲಿ ಮೋಡ ಮುಸುಕಿದ ವಾತಾವರಣವಿತ್ತು. ತಡರಾತ್ರಿ ಗುಡುಗು, ಸಿಡಿಲಿನ ಅರ್ಭಕದ ಜತೆ ಆಲಿಕಲ್ಲು ಮಳೆ ಸುರಿದಿದೆ. ಪರ್ತಾಪುರ, ದೇವರಗುಂಡಗುರ್ತಿ, ಜೇರಬಂಡಿ, ಕೊಪ್ಪರ, ಹೂವಿನಹೆಡಗಿ, ಜೋಳದಹೆಡಗಿಯಲ್ಲಿ ನಾಟಿ ಮಾಡಿದ್ದ ಭತ್ತದ ಕಾಳು ಉದುರಿವೆ. ಇನ್ನು ಸುಂಕ ಕಟ್ಟಿದ್ದ ಸಜ್ಜೆ ಬೆಳೆಗಳಿಗೂ ಹಾನಿಯಾಗಿದೆ. ವಿವಿಧೆಡೆ ಗಾಳಿಗೆ ಮರಗಳು ಧರೆಗುರುಳಿದ್ದು, ವಿದ್ಯುತ್ ಕಂಬಗಳು ಬಿದ್ದಿವೆ. ಜನರು ವಿದ್ಯುತ್ ಇಲ್ಲದೆ ರಾತ್ರಿಯಿಡೀ ಸಮಸ್ಯೆ ಎದುರಿಸುವಂತಾಯಿತು.