ಲಿಂಗಸುಗೂರು ಕೃಷಿ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಫಸಲ್ ಭಿಮಾ ಯೋಜನೆ ಕಾರ್ಯಕ್ರಮಕ್ಕೆ ಶಾಸಕ ಮಾನಪ್ಪ ವಜ್ಜಲ ಚಾಲನೆ ನೀಡಿದರು. ಉಪ ಕೃಷಿ ನಿರ್ದೇಶಕ ಡಾ. ಮುತ್ತುರಾಜ, ಕೃಷಿ ಸಹಾಯಕ ನಿರ್ದೇಶಕಿ ಎನ್.ವಿಜಯಮೂರ್ತಿ, ಬಿಜೆಪಿ ಮಂಡಲ ಅಧ್ಯಕ್ಷ ಕೆ.ನಾಗಭೂಷಣ, ಪ್ರಮುಖರಾದ ನಿಂಗಣ್ಣ ದೇವಿಕೇರಿ, ಕೃಷಿ ಅಧಿಕಾರಿ ಅಮರೇಗೌಡ, ಮುದುಕಪ್ಪ ನಾಯಕ ಇದ್ದರು.  
ರಾಯಚೂರು

ರೈತರು ಫಸಲ್ ಭಿಮಾ ಲಾಭ ಪಡೆಯಿರಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಮಾನಪ್ಪ ವಜ್ಜಲ ಸಲಹೆ
  • ಲಿಂಗಸುಗೂರಿನಲ್ಲಿ ಜಾಗೃತಿ ಕಾರ್ಯಕ್ರಮ
ಲಿಂಗಸುಗೂರು: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ವಿಮಾ ಯೋಜನೆಯ ಲಾಭವನ್ನು ರೈತರು ಪಡೆಯಬೇಕು ಎಂದು ಶಾಸಕ ಮಾನಪ್ಪ ವಜ್ಜಲ ಹೇಳಿದರು.
ಕೃಷಿ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ 2026-27ನೇ ಸಾಲಿನ ಮುಂಗಾರು ಹಂಗಾಮಿನ ಫಸಲ್ ಭಿಮಾ ಯೋಜನೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅತೀವಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ ಮುಂತಾದ ಪ್ರಕೃತಿ ವಿಕೋಪಗಳು ಸೇರಿದಂತೆ ಹಲವಾರು ಕಾರಣಗಳಿಂದ ಬೆಳೆ ನಷ್ಟ ಉಂಟಾದಾಗ ರೈತರ ನೆರವಿಗೆ ಬರಲು ಈ ಯೋಜನೆ ಜಾರಿಗೆ ತಂದಿದ್ದು, ವಿವಿಧ ಬೆಳೆಗಳಿಗೆ ಸಾಲ ಪಡೆದ ರೈತರು ಮತ್ತು ಬೆಳೆಸಾಲ ಪಡೆಯದ ರೈತರು ಬ್ಯಾಂಕುಗಳಿಗೆ ಘೋಷಣೆ ಸಲ್ಲಿಸಲು ಬೆಳೆವಾರು ಪ್ರೀಮಿಯಂ ಮೊತ್ತ, ನಿಗದಿಪಡಿಸಿದ ಅವಧಿಯೊಳಗೆ ಮೊತ್ತದ ಹಣ ತುಂಬಿ ಇದರ ಲಾಭ ಪಡೆಯಬೇಕು ಎಂದರು.
ಕಲಬುರಗಿಯಲ್ಲಿ ಮುಖ್ಯಮಂತ್ರಿಗಳು ನಡೆಸಿದ್ದ ಸಭೆಯಲ್ಲಿ ಭೀಕರ ಬರ ಪರಿಸ್ಥಿತಿ ಕುರಿತು ಗಮನಕ್ಕೆ ತಂದಿದ್ದೇನೆ. ರೈತರು ಬಿತ್ತನೆಗೆ ಬೀಜ ಗೊಬ್ಬರ ಖರೀದಿಸಿ ತೊಂದರೆ ಪಡುತ್ತಿದ್ದಾರೆ. ಇಡೀ ರಾಯಚೂರು ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಸರ್ಕಾರ ಘೋಷಿಸಬೇಕು. ಜಿಲ್ಲೆಯಿಂದ ಸಾಕಷ್ಟು ರೈತರು ಗುಳೆ ಹೋಗುತ್ತಿದ್ದಾರೆ. ಸರ್ಕಾರ ಇದನ್ನು ತಡೆಯಬೇಕು. ಅಲ್ಲದೆ ನಷ್ಟದಲ್ಲಿರುವ ರೈತರ ಜಮೀನಿನ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ಹಣ ನೀಡಬೇಕು. ಲಿಂಗಸುಗೂರು ತಾಲೂಕಿನಲ್ಲಿ ಬಿತ್ತಿದ ಬೆಳೆ ಶೇ.100 ಹಾಳಾಗಿದ್ದು ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಉಪ ನಿರ್ದೇಶಕ ಡಾ.ಮುತ್ತುರಾಜ, ಸಹಾಯಕ ಕೃಷಿ ನಿರ್ದೇಶಕಿ ಎನ್.ವಿಜಯಮೂರ್ತಿ, ಬಿಜೆಪಿ ಮಂಡಲ ಅಧ್ಯಕ್ಷ ಕೆ.ನಾಗಭೂಷಣ, ನಿಂಗಣ್ಣ ದೇವಿಕೇರಿ, ಕೃಷಿ ಅಧಿಕಾರಿ ಅಮರೇಗೌಡ, ಮುದುಕಪ್ಪ ನಾಯಕ ಇತರರಿದ್ದರು.