ಸಂತೆಕೆಲ್ಲೂರು ಗ್ರಾಮದ ಖರೀದಿ ಕೇಂದ್ರದ ಎದುರು ತೊಗರಿ ಮೂಟೆಗಳ ಹೊತ್ತು ಸರದಿಯಲ್ಲಿ ನಿಂತಿರುವ ಟ್ರ್ಯಾಕ್ಟರ್‌ಗಳು.
- ಖರೀದಿಗೆ 31 ಕೊನೇ ದಿನ
- ಅವಧಿ ವಿಸ್ತರಿಸಲು ಒತ್ತಾಯ
ಮಸ್ಕಿ: ತೊಗರಿ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿದ ರೈತರು ಧಾನ್ಯ ಮಾರಾಟಕ್ಕಾಗಿ ಹಗಲು ರಾತ್ರಿ ಕಾಯುವಂತಾಗಿದೆ.
ಮಾ.31 ತೊಗರಿ ಖರೀದಿಗೆ ಕೊನೆಯ ದಿನವಾಗಿದೆ.ಹೆಸರು ನೋಂದಾಯಿಸಿದ ಸಾಕಷ್ಟು ರೈತರಿಂದ ಎರಡ್ಮೂರು ದಿನದಲ್ಲಿ ತೊಗರಿ ಖರೀದಿ ಸಾಧ್ಯವಿಲ್ಲ. ಹೀಗಾಗಿ ರೈತರು ಚಿಂತೆಗೀಡಾಗಿದ್ದು, ತೊಗರಿ ಖರೀದಿ ಅವಧಿಯನ್ನು ವಿಸ್ತರಿಸಬೇಕು. ತೂಕದ ತಕ್ಕಡಿಗಳನ್ನು ಹೆಚ್ಚಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ತೊಗರಿ ಖರೀದಿ ಕೇಂದ್ರಗಳಲ್ಲಿ ಟೋಕನ್ ಪಡೆದ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಬೇರೆ ಕೆಲಸ ಬಿಟ್ಟು ದಿನಗಟ್ಟಲೆ ಖರೀದಿ ಕೇಂದ್ರದ ಮುಂದೆ ಕಾಯುವಂತಾಗಿದೆ.
ಕೆಲವೊಮ್ಮೆ ಯಂತ್ರದ ತೊಂದರೆ, ಖಾಲಿ ಚೀಲಗಳ ಕೊರತೆ, ಗೋದಾಮುಗಳ ಸಮಸ್ಯೆಯಿಂದಾಗಿ ಖರೀದಿ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿರುವದರಿಂದ ರೈತರಿಗೆ ತೊಂದರೆಯಾಗಿದೆ. ತೊಗರಿ ಮೂಟೆಗಳನ್ನು ಹೊತ್ತ ಟ್ರ್ಯಾಕ್ಟರ್‌ಗಳು ಗಂಟೆಗಟ್ಟಲೆ ನಿಲ್ಲಬೇಕಾಗಿದೆ.
ತಾಲೂಕು ಮತ್ತು ಜಿಲ್ಲಾ ಆಡಳಿತ ಈ ಬಗ್ಗೆ ಗಮನ ಹರಿಸಿ ತೊಗರಿ ಖರೀದಿ ಅವಧಿಯನ್ನು ವಿಸ್ತರಿಸಬೇಕೆಂದು ಎಐಡಿವೈಒ ಜಿಲ್ಲಾ ಉಪಾಧ್ಯಕ್ಷ ತಿರುಪತಿ ಗೋನ್ವಾರ ಹಾಗೂ ರೈತರು ಆಗ್ರಹಿಸಿದ್ದಾರೆ.