ತಾಲೂಕಿನ ವಡವಟ್ಟಿ ಗ್ರಾಮದ ಹೊರವಲಯದ ಜಮೀನಿನಲ್ಲಿ ರೈತ ನರಸಿಂಹಲು ಮಳೆಗಾಗಿ ಆಕಾಶ ನೋಡುತ್ತಿರುವುದು. 
ರಾಯಚೂರು

ಮಳೆಗಾಗಿ ರೈತರ ಚಿತ್ತ, ಆಕಾಶದತ್ತ!

ಪ್ರಮುಖ ಮುಖ್ಯಾಂಶಗಳು

  • ಶೇ.29 ರಷ್ಟು ಮಾತ್ರ ಬಿತ್ತನೆ
  • ಮಳೆಗಾಗಿ ರೈತರ ಚಿತ್ತ, ಆಕಾಶದತ್ತ!
  • ಮಳೆ ಬಂದರು ಹರಿಯಾಗಿಲ್ಲ ಭೂಮಿ

ರಾಚಯ್ಯ ಸ್ವಾಮಿ ಮಾಚನೂರು

ರಾಯಚೂರು ಮುಂಗಾರಿನ ನಂಬಿಕೆಯಲ್ಲಿ ಜಿಲ್ಲೆಯ ರೈತರು ಜಮೀನುಗಳನ್ನು ಹದಗೊಳಿಸಿ ಬಿತ್ತನೆಗೆ ಸಿದ್ಧರಾಗಿದ್ದರು. ಆದರೆ ಮಳೆರಾಯ ಮುನಿಸಿಕೊಂಡಿರುವುದರಿಂದ ಬಿತ್ತನೆ ಕಾರ್ಯ ಸ್ಥಗಿತಗೊಂಡಿದೆ. ರೈತ ಸಮುದಾಯವನ್ನು ತೀವ್ರ ಸಂಕಷ್ಟದಲ್ಲಿ ದೂಡಿದೆ. ಬಿತ್ತನೆಗೆ ಸೂಕ್ತ ಸಮಯವಾಗಿದ್ದರೂ ಮಳೆಯಿಲ್ಲದೆ ಮಣ್ಣಿನಲ್ಲಿ ತೇವಾಂಶವೂ ಇಲ್ಲವಾಗಿದ್ದು ರೈತರು ಆತಂಕಗೊಂಡಿದ್ದಾರೆ.

ಕಳೆದ ವರ್ಷದಂತೆ ಈ ಬಾರಿಯ ಉತ್ತಮ ಮಳೆ ನಿರೀಕ್ಷೆ ಹುಸಿಯಾಗಿದೆ. ಮುಂಗಾರು ಹಂಗಾಮಿನ ಬಿತ್ತನೆಗೆ ಸಿದ್ಧರಾಗಿದ್ದ ರೈತರು ಆಕಾಶದತ್ತ ಮುಖಮಾಡಿ ಮಳೆರಾಯನ ಆಗಮನಕ್ಕೆ ಕಾಯುತ್ತಿದ್ದಾರೆ. ಮಳೆ ಕೊರತೆಯಿಂದ ಈಗಾಗಲೇ ಪೂರ್ವ ಹಂಗಾಮಿನ ಬೆಳೆಗಳ ಇಳುವರಿ ಕಡಿಮೆಯಾಗುವ ಆತಂಕವೂ ಉಂಟಾಗಿದೆ. ರೈತರು ಬಿತ್ತನೆಗಾಗಿ ಮಳೆ ಬರುವಿಕೆಗೆ ಕಾಯುತ್ತಿದ್ದಾರೆ. ಈಗಾಗಲೇ ಟ್ರಾೃಕ್ಟರ್ ಬಾಡಿಗೆ ಹಾಗೂ ಇನ್ನಿತರ ಕೆಲಸಗಳಿಗೆ ರೈತರು ಸಾಲ ಮಾಡಿ ಹಣ ಖರ್ಚು ಮಾಡಿದ್ದಾರೆ. ಮಳೆ ಬಾರದಿದ್ದರೆ ಈ ಖರ್ಚು ಮಾಡಿದಿಂದ ಸಂಪೂರ್ಣ ನಷ್ಟವಾಗುತ್ತದೆಂದು ರೈತರು ಆತಂಕ ಪಡುತ್ತಿದ್ದಾರೆ.

ರೈತರಲ್ಲಿ ಆತಂಕ

ಮುಂದೆ ಮಳೆ ಬರಬಹುದು ಎಂಬ ನಂಬಿಕೆಯಿಂದ ಈಗಗಾಲೇ ಹತ್ತಿ ಬಿತ್ತನೆ ಮಾಡಿದ ರೈತರಲ್ಲಿ ಆತಂಕ ಶುರುವಾಗಿದೆ. ಅಲ್ಪ ಪ್ರಮಾಣದ ಮಳೆಯನ್ನು ನಂಬಿ ಹತ್ತಿ ಬೀಜ ಬಿತ್ತನೆ ಮಾಡಲಾಗಿದ್ದು, ಮಳೆಯಿಲ್ಲದೆ ಬೀಜ ಹುಸಿಹೋಗುವ ಆತಂಕ ರೈತರಲ್ಲಿ ಮನೆಮಾಡಿದೆ. ಜಿಲ್ಲೆಯಲ್ಲಿ ಭತ್ತ, ಹತ್ತಿ, ತೋಗರಿ ಸೇರಿ ವಿವಿಧ ಬೆಳೆಗಳ ಬಿತ್ತನೆ ಗುರಿಯನ್ನು ಕೃಷಿ ಇಲಾಖೆಯಿಂದ ಈ ಬಾರಿ 5,72,375 ಹೆಕ್ಟರ್ ಬಿತ್ತನೆ ಗುರಿ ಹಾಕಿಕೊಂಡಿದ್ದು, ಆದರೆ ಸದ್ಯ ಶೇ.29.23 ರಷ್ಟು ಅಂದರೆ 1,67,327 ಹೆಕ್ಟರ್ ಮಾತ್ರ ಬಿತ್ತನೆಯಾಗಿದೆ. ಈ ಪೈಕಿ ರಾಯಚೂರು 41300,ಮಾನ್ವಿ 7000,ಸಿರವಾರ 16324, ದೇವದುರ್ಗ 44626, ಲಿಂಗಸುಗೂರು 36472 ,ಮಸ್ಕಿ 12320, ಸಿಂಧನೂರು 9285 ಹೆಕ್ಟರ್ ಮಾತ್ರ ಬಿತ್ತನೆಯಾಗಿದೆ.

ಜೋರು ಮಳೆ ಇಲ್ಲ

ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಜೂ.1 ರಿಂದ 19 ರವರೆಗೆ 120 ಮೀ.ಮೀ ಮಳೆಯಾಗಬೇಕಿತ್ತು, ಆದರೆ 187 ಮೀ.ಮೀ ಮಳೆಯಾಗಿದೆ. ಇಚೇಗೆ ಸುರಿದ ಮಳೆಯಿಂದಾಗಿ ಭೂಮಿ ಹದವಾಗಿದ್ದರಿಂದ ರೈತರು ಖುಷಿಯಿಂದ ತೊಗರಿ, ಹತ್ತಿ ಸೇರಿದಂತೆ ಇತರೆ ಬೀಜಗಳನ್ನು ಬಿತ್ತನೆ ಮಾಡಿದ್ದಾರೆ. ಬಿತ್ತನೆಗೈದು ತಿಂಗಳು ಕಳೆದರೂ ಮಳೆ ಬಾರದ್ದರಿಂದ ಬೆಳೆದು ನಿಂತ ಬೆಳೆಗಳು ಮಳೆ ಇಲ್ಲದೇ ಬಾಡಿ ಹೋಗುತ್ತಿವೆ.

ಆಗಾಗ ಜಿಟಿ ಜಿಟಿ ಮಳೆ ಬಂದರೂ ಅದು ಬೆಳೆಗಳಿಗೆ ತೇವಾಂಶ ತರುಷ್ಟು ಸುರಿಯುತ್ತಿಲ್ಲ. ಬಿತ್ತನೆಗಾಗಿ ಸಾವಿರಾರು ರೂಪಾಯಿ ಖರ್ಚುಮಾಡಿದ ರೈತರ ಮುಖದಲ್ಲಿ ಚಿಂತೆಯ ಕಾರ್ಮೋಡಗಳು ಕವಿಯಲಾರಂಬಿಸಿವೆ. ಜತೆಗೆ ಕಳೆದೊಂದು ವಾರದಲ್ಲಿ ಬಿತ್ತನೆಗೊಂಡ ಬೆಳೆಗಳು ಮೊಳಕೆಯೊಡೆಯುವ ಹಂತದಲ್ಲಿದ್ದು, ಮಳೆ ವಿಳಂಬವಾದರೆ ತೇವಾಂಶ ಕೊರತೆಯಿಂದ ಮೊಳೆ ಒಡೆಯುವಿಕೆ, ಬೆಳವಣಿಗೆ ಕುಂಠಿತಗೊಳ್ಳುವ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಭೂಮಿಯ ತೇವಾಂಶ ಕಡಿಮೆಯಾಗುತ್ತಿರುವುದು ರೈತರ ಚಿಂತೆಗೆ ಕಾರಣವಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಬಿತ್ತನೆ ಮಾಡಿದ್ದು ಮಳೆ ಆಗದಿದ್ದರೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಮೇವಿನ ಅಭಾವ

ಮುಂಗಾರು ಆರಂಭದಲ್ಲಿ ಒಂದಿಷ್ಟು ಮಳೆ ಬಂದಿದ್ದರಿಂದ ಹುಲ್ಲು ಚಿಗಿತು ಜಾನುವಾರುಗಳು ತಿನ್ನಲು ಅನುಕೂಲವಾಗಿತ್ತು.ಆದರೆ, ಇತ್ತೀಚೆಗೆ ಮಳೆ ಕೈಕೊಟ್ಟಿದ್ದರಿಂದ ಹುಲ್ಲು ಒಣಗಿ ದನಕರುಗಳಿಗೆ ಕಷ್ಟ ಎದುರಾಗಿದೆ. ಈಗ ಎತ್ತುಗಳಿಗೆ ಜಮೀನುಗಳಲ್ಲಿ ಕೆಲಸ ಹೆಚ್ಚು ಇರುವುದರಿಂದ ಅವುಗಳಿಗೆ ಹೊಟ್ಟೆತುಂಬ ಮೇವು ಬೇಕು. ಆದರೆ, ರೈತರ ಕಣದಲ್ಲಿ ಒಣ ಮೇವು ಖಾಲಿಯಾಗಿರುವುದರಿಂದ ಅವುಗಳಿಗೆ ಮೇವು ಒದಗಿಸುವುದು ಕಷ್ಟವಾಗಿದೆ. ಹಾಗಾಗಿ ಎತ್ತುಗಳು ಸೇರಿ ಇತರ ಜಾನುವಾರುಗಳು ಅರಣ್ಯದಲ್ಲಿ ಹಸಿ ಹುಲ್ಲನ್ನು ಹುಡುಕುತ್ತ ಸಂಜೆಯವರೆಗೆ ತಿಂದರೂ ಹೊಟ್ಟೆ ತುಂಬ ಸಿಗುತ್ತಿಲ್ಲ.

ತಗ್ಗಿದ ರಸಗೊಬ್ಬರ ಬೇಡಿಕೆ

ಜಿಲ್ಲೆಯಲ್ಲಿ ಮುಂಗಾರು ಮಳೆ ಸರಿಯಾಗಿ ಬಾರದಿರುವುದರಿಂದ ರಸ ಗೊಬ್ಬರದ ಬೇಡಿಕೆ ಕಡಿಮೆಯಾಗಿದ್ದು, ಜೂ.19 ರವರೆಗೆ ಸದ್ಯ ಯೂರಿಯಾ 17838 ಮೇ.ಟನ್, ಡಿಎಪಿ 9992, ಎಂಒಪಿ 380, ಕಾಂಪ್ಲೇಕ್ಸ್ 43472 , ಎಸ್‌ಎಸ್‌ಪಿ 541 ಸೇರಿಒ ಒಟ್ಟು 72222 ಮೇ.ಟನ್ ಮಾತ್ರ ಮಾರಾಟವಾಗಿದ್ದು, ಸದ್ಯ 69524 ಮೇ.ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಜತೆಗೆ ಭತ್ತ, ತೊಗರಿ,ಹೆಸರು, ಸಜ್ಜೆ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿ ಒಟ್ಟು 2189 ಕ್ವೀಂಟಲ್ ಬೀಜಗಳನ್ನು ವಿತರಣೆ ಮಾಡಲಾಗಿದ್ದು, 2691 ಕ್ವೀಂಟಲ್ ಬೀಜಗಳು ದಾಸ್ತಾನು ಮಾಡಲಾಗಿದೆಂದು ತಿಳಿದುಬಂದಿದೆ.

ಜಿಲ್ಲೆಯಲ್ಲಿ ಕೆಲವು ಪ್ರದೇಶದಲ್ಲಿ ಮಾತ್ರ ಮಳೆಯಾಗಿದ್ದು, ಉಳಿದ ಪ್ರದೇಶದಲ್ಲಿ ಸರಿಯಾಗಿ ಮಳೆಯಾಗಿಲ್ಲ. ಈ ಬಾರಿ ಮಲೆನಾಡು ಪ್ರದೇಶದಲ್ಲಿಯು ಮಳೆಯಾಗುತ್ತಿಲ್ಲ. ಜಿಲ್ಲೆಯಲ್ಲಿ ಅನೇಕ ರೈತರು ಹತ್ತಿ, ತೊಗರಿಯನ್ನು ಬಿತ್ತನೆ ಮಾಡಿದ್ದಾರೆ. ಒಂದು ವಾರದಲ್ಲಿ ಸರಿಯಾದ ಮಳೆಯಾಗದಿದ್ದರೆ ಬೆಳೆಗಳು ಉಳಿಯುತ್ತವೆ. ಇನ್ನು ಬಿತ್ತನೆಗೆ ಜುಲೈ ತಿಂಗಳಲ್ಲಿ ಸಮಯವಿದೆ.

ಪ್ರಕಾಶ ಚೌಹಣ್ ಜಂಟಿ ನಿರ್ದೇಶಕ ಕೃಷಿ ಇಲಾಖೆ ರಾಯಚೂರು

ಕಳೆದ ಬಾರಿ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಿದ್ದರಿಂದ ಖುಷಿಯಿಂದ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದೇವು. ಆದರೆ ಈ ಬಾರಿ ಮಳೆಗಾಗಿ ಆಕಾಶ ನೋಡುವಂತಾಗಿದೆ. ಈಗಾಗಲೇ ಬಿತ್ತನೆ ಮಾಡಿದ ಹತ್ತಿ ಹಾಗೂ ಸೂರ್ಯ ಕಾಂತಿ ಮೊಳಕೆ ಒಡೆದಿದ್ದು, ಎರಡು ದಿನದಲ್ಲಿ ಮಳೆಯಾಗದಿದ್ದರೆ ಪರ್ಯಾಯ ಬೆಳೆ ಮೊತ್ತೊಮ್ಮೆ ಬಿತ್ತನೆ ಮಾಡಬೇಕಾಗುತ್ತದೆ.

ಲಕ್ಷ್ಮಣ ಗೌಡ ರೈತ ಕಡಗಂದೊಡ್ಡಿ