ಗೌಡೂರು ಗ್ರಾಮದ ಹೊಲದಲ್ಲಿ ತಾಯಿ-ಮಗ ರಸಗೊಬ್ಬರ ಹಾಕುತ್ತಿರುವ ದೃಶ್ಯ.
ಹಟ್ಟಿಚಿನ್ನದಗಣಿ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಗೌಡೂರು ಗ್ರಾಮದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಜುಲೈ ಕೊನೆಯ ವಾರದಲ್ಲಿ ಸುರಿದ ಅಲ್ಪ ಮಳೆ ಬೆಳೆಗಳಿಗೆ ಜೀವ ತುಂಬಿತು. ಆದರೆ, ರೈತರ ಕಷ್ಟಗಳು ಮಾತ್ರ ಕಡಿಮೆಯಾಗಿಲ್ಲ. ಗುರುವಾರ ತಾಯಿ ಶಿವಮ್ಮ ಕೈಯಲ್ಲಿ ಗೊಬ್ಬರ ಹಿಡಿದು ಬೆಳೆಗಳಿಗೆ ಹಾಕುತ್ತಿದ್ದರೆ, ಮಗ ವೀರೇಶ ಎತ್ತಿನಂತೆ ಮುಂದೆ ಸಾಗುತ್ತಿರುವ ಹೃದಯಸ್ಪರ್ಶಿ ದೃಶ್ಯ ಕಂಡುಬಂತು.
ಅನೇಕ ಬಡ ರೈತರಿಗೆ ಟ್ರ್ಯಾಕ್ಟರ್, ಪವರ್ ಟಿಲ್ಲರ್ ಅಥವಾ ಇತರ ಕೃಷಿ ಯಂತ್ರೋಪಕರಣಗಳು ಕನಸಾಗಿಯೇ ಉಳಿದಿವೆ. ಎತ್ತುಗಳನ್ನು ಬಾಡಿಗೆಗೆ ಪಡೆಯುವುದೂ ಕಷ್ಟವಾಗಿದ್ದರಿಂದ ಕುಟುಂಬದ ಸದಸ್ಯರೇ ಎತ್ತುಗಳ ಸ್ಥಾನದಲ್ಲಿದ್ದು ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಮಳೆಯ ಅನಿಶ್ಚಿತತೆ, ಮತ್ತೊಂದು ಕಡೆ ಗೊಬ್ಬರ, ಬೀಜ, ಕೂಲಿ ಮತ್ತು ಕೃಷಿ ವೆಚ್ಚಗಳ ಏರಿಕೆ ರೈತರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ.
ಹೊಲದಲ್ಲಿ ಮಗ ಎತ್ತಿನಂತೆ ದುಡಿಯುತ್ತಿರುವ ಈ ದೃಶ್ಯ ಕೇವಲ ಕಣ್ಣೀರು ತರಿಸುವ ಘಟನೆ ಮಾತ್ರವಲ್ಲ, ನಮ್ಮ ಕೃಷಿ ವ್ಯವಸ್ಥೆಯ ಎದುರಿರುವ ಕಹಿ ವಾಸ್ತವದ ಪ್ರತಿಬಿಂಬವಾಗಿದೆ. ರೈತರಿಗೆ ಸಮಯಕ್ಕೆ ಯಂತ್ರೋಪಕರಣಗಳು, ಕೃಷಿ ಅನುದಾನ, ಎತ್ತು ಬಾಡಿಗೆ ಸಹಾಯಧನ ಹಾಗೂ ಅಗತ್ಯ ನೆರವು ತಲುಪಿಸುವ ಕೆಲಸ ಸರ್ಕಾರ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.