ಮಸ್ಕಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಆರ್.ಬನಸಗೌಡ ತುರ್ವಿಹಾಳ ಮಾತನಾಡಿದರು. ತಹಸೀಲ್ದಾರ್ ಮಂಜುನಾಥ ಭೋಗಾವತಿ, ತಾಪಂ ಇಒ ಅಮರೇಶ ಯಾದವ್ ಇದ್ದರು.
- ಗವಿಸಿದ್ಧೇಶ್ವರ
- ದೇವಸ್ಥಾನ
- ಮೈದಾನ
ಮಸ್ಕಿ: ಪಟ್ಟಣದ ಹೊರವಲಯದಲ್ಲಿರುವ ಸೂರ್ಯ ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ, ದವಸ-ಧಾನ್ಯ ಸಂಗ್ರಹಿಸಲು ಸೂಕ್ತ ಸ್ಥಳವಲ್ಲ. ರೈತರು ಬಂದು ಹೋಗಲು ತೊಂದರೆಯಾಗಿದ್ದು, ಕೂಡಲೇ ಈ ಮುಂಚೆ ಇದ್ದ ಪುರಸಭೆ ಹತ್ತಿರದ ಹಳೇ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಸೂಚನೆ ನೀಡಿದರು.
ತಾಲೂಕಿನ ಹೂವಿನಬಾವಿ ಗ್ರಾಮದ ಗವಿಸಿದ್ಧೇಶ್ವರ ದೇವಸ್ಥಾನದ ಮೈದಾನದಲ್ಲಿ ಮಂಗಳವಾರ ತಾಲೂಕು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಸ್ಕಿ ಪಟ್ಟಣದಲ್ಲಿ ನಿರ್ಮಿಸಲಾದ ರೈತ ಸಂಪರ್ಕ ಕೇಂದ್ರದ ಹೊಸ ಕಟ್ಟಡ ಈಗಾಗಲೇ ಕುಸಿತಗೊಂಡಿದೆ. ಕಳಪೆ ಕಾಮಗಾರಿ ಮಾಡಲಾಗಿದ್ದು, ಗುತ್ತಿಗೆದಾರರ ವಿರುದ್ಧ್ದ ತನಿಖೆ ನಡೆಸಬೇಕು ಎಂದ ಅವರು, ರೈತ ಸಂಪರ್ಕ ಕೇಂದ್ರದಲ್ಲಿ ದಿನಗೂಲಿ ಸಿಬ್ಬಂದಿ ಸ್ಥಳೀಯರಿದ್ದು, ರಾತ್ರೋರಾತ್ರಿ ಬೀಜಗಳು, ಕೃಷಿ ಸಲಕರಣೆಗಳು ಮಾಯವಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅವರನ್ನು ಕೆಲಸದಿಂದ ತೆಗೆಯುವಂತೆ ತಾಕೀತು ಮಾಡಿದರು.
ವೈದ್ಯರ ನಿರ್ಲಕ್ಷೃದಿಂದ ತಾಲೂಕು ಆಸ್ಪತ್ರೆಗೆ ರೋಗಿಗಳು ಬರುವುದು ಕಡಿಮೆಯಾಗುತ್ತಿದ್ದು, ವೈದ್ಯರು ಮುತುವರ್ಜಿಯಿಂದ ಚಿಕಿತ್ಸೆ ನೀಡಬೇಕು. ಇಲ್ಲೇ ಮೃತದೇಹ ತಪಾಸಣೆ ಮಾಡಬೇಕು. ಬೇರೆ ಊರುಗಳಿಗೆ ಕಳಿಸಬಾರದು ಎಂದು ವೈದ್ಯಾಧಿಕಾರಿ ಅಮರೇಶ ಪಾಟೀಲ್‌ಗೆ ಶಾಸಕ ಸೂಚನೆ ನೀಡಿದರು.
ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಅನೇಕ ಕಾರ್ಯ ಯೋಜನೆಯನ್ನು ರೂಪಿಸಲಾಗಿದೆ. ಶಿಕ್ಷಕರು ಚೆನ್ನಾಗಿ ಪಾಠ ಮಾಡಬೇಕು. ಅಧಿಕಾರಿಗಳು ಖುದ್ದು ಪರಿಶೀಲನೆ ಮಾಡಬೇಕು ಎಂದು ಬಿಇಒಗೆ ತಿಳಿಸಿದರು. ಕ್ಷೇತ್ರದ ಕೆಲವೆಡೆ ಅಂಗನವಾಡಿ ಕಟ್ಟಡ ಕಟ್ಟಲು ಸಾರ್ವಜನಿಕರಿಂದ ತೊಂದರೆಯಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮೆಹಬೂಬ್‌ಸಾಬ್ ಮುದ್ದಾಪುರ, ಕೆಡಿಪಿ ಸದಸ್ಯರಾದ ಬಸವಂತಪ್ಪ ಮಟ್ಟೂರು, ಬಸಗೌಡ ಕೊಳಬಾಳ, ದೇವಪ್ಪ ರಾಠೋಡ, ಕರಿಯಪ್ಪ ಹಾಲಾಪುರ, ರಾಜೇಶ್ವರಿ ಮಸ್ಕಿ, ತಹಸೀಲ್ದಾರ್ ಮಂಜುನಾಥ ಭೋಗಾವತಿ, ತಾಪಂ ಇಒ ಅಮರೇಶ ಯಾದವ ಇತರರಿದ್ದರು.