ದೇವದುರ್ಗ ತಾಲೂಕು ಸುಣ್ಣದಕಲ್ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಆಯೋಜಿಸಿದ್ದ ಕಲಿಕಾ ಹಬ್ಬವನ್ನು ಬಿಇಒ ಮಲ್ಲಿಕಾರ್ಜುನ ಉದ್ಘಾಟಿಸಿದರು. ಬಿಆರ್‌ಸಿ ಶಿವರಾಜ ಪೂಜಾರಿ, ಹನುಮಂತ್ರಾಯ ಶಾಖೆ, ವಿರುಪನಗೌಡ ಇತರರಿದ್ದರು.
- ಬಿಇಒ ಮಲ್ಲಿಕಾರ್ಜುನ ಸಲಹೆ
- ದೇವದುರ್ಗ ಸುಣ್ಣದಕಲ್ ಕಲಿಕಾಹಬ್ಬ
ದೇವದುರ್ಗ: ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಅವರಲ್ಲಿ ಕೌಶಲವೃದ್ಧಿಯಾಗುತ್ತದೆ. ಕಲಿಕಾ ಹಬ್ಬ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಿದೆ ಎಂದು ಬಿಇಒ ಮಲ್ಲಿಕಾರ್ಜುನ ಹೇಳಿದರು.
ತಾಲೂಕಿನ ಸುಣ್ಣದಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ವಲಯ ಮಟ್ಟದ ಕಲಿಕಾಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲಿಕಾ ಹಂತದಲ್ಲಿ ಹಿಂದುಳಿದ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಲಿವೆ. ಕಲಿಕಾ ಹಬ್ಬ, ಕಲೋತ್ಸವ, ಕ್ರೀಡಾಕೂಟ ಮಕ್ಕಳನ್ನು ಮಾನಸಿಕ ಹಾಗೂ ದೈಹಿಕವಾಗಿ ಸದೃಢರನ್ನಾಗಿಸುತ್ತವೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ದಾಖಲಾತಿ ಹೆಚ್ಚಳಕ್ಕೆ ವಿವಿಧ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ವಿದ್ಯಾರ್ಥಿಗಳು ಹಾಗೂ ಪಾಲಕರು ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಬೇಕು. ವಿದ್ಯಾರ್ಥಿಗಳ ಆಸಕ್ತಿ ಪ್ರೊತ್ಸಾಹಿಸಿ ಕಲಿಕೆಗೆ ಅವಕಾಶ ಕಲ್ಪಿಸಬೇಕು ಎಂದರು.
ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶಿವರಾಜ ಪೂಜಾರಿ, ಸನೌಸಂ ತಾಲೂಕು ಅಧ್ಯಕ್ಷ ಹನುಮಂತ್ರಾಯ ಶಾಖೆ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ವಿರುಪನಗೌಡ, ಕಾರ್ಯದರ್ಶಿ ಗಂಗಾಧರ, ನಿರ್ದೇಶಕರಾದ ಪ್ರಕಾಶ ಹೊನ್ನಟಗಿ, ಗಂಗಾರೆಡ್ಡಿ ಪಾಟೀಲ್, ಇಸಿಒ ರಾಜನಗೌಡ, ವೆಂಕಟೇಶ, ಸಿಆರ್‌ಪಿ ಸೋಮಶೇಖರ್ ದೊರೆ, ಕೃಷ್ಣಮೂರ್ತಿ, ರಾಘವೇಂದ್ರ ಕೊಟ್ನೆಕಲ್, ಮುಖ್ಯಶಿಕ್ಷಕ ಸಿದ್ದಯ್ಯ ಸೊನ್ನದ್ ಇತರರಿದ್ದರು.