ರಾಯಚೂರಿನ ಆರ್‌ಟಿಪಿಎಸ್‌ನ ಹೊರನೋಟ. 
ರಾಯಚೂರು

ಎಲ್‌ನಿನೋ ಎಫೆಕ್ಟ್ ತಗ್ಗದ ವಿದ್ಯುತ್ ಬೇಡಿಕೆ

ರಾಚಯ್ಯ ಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಬಿರುಬೇಸಿಗೆಯಿಂದಲೂ ನಿರಂತರ ಥರ್ಮಲ್ ವಿದ್ಯುತ್ ಮೇಲೆ ಒತ್ತಡ
  • ಜಲವಿದ್ಯುತ್ ಘಟಕಗಳಿಗೆ ನೀರಿನ ಕೊರತೆ
  • ಮುಂಗಾರು ವೈಫಲ್ಯ=
ರಾಚಯ್ಯಸ್ವಾಮಿ ಮಾಚನೂರು
ರಾಯಚೂರು ಪ್ರಸಕ್ತ ವರ್ಷ ಮುಂಗಾರು ಆರಂಭದಲ್ಲಿಯೇ ಕೈಕೊಟ್ಟಿದೆ. ತಿಂಗಳಾದರೂ ಸುರಿಯದ ಮಳೆಯಿಂದ ಕೃಷಿಕರು ಕಂಗಾಲಾಗಿದ್ದರೆ, ವಿದ್ಯುತ್ ಬಳಕೆ ಪ್ರಮಾಣವೂ ಇದೇ ಕಾರಣಕ್ಕೆ ತೀವ್ರಗೊಂಡಿದೆ. ಬೇಸಿಗೆಯಂತೆಯೇ ಮಳೆಗಾಲದಲ್ಲಿಯೂ ವಿದ್ಯುತ್ ಬಳಕೆ ಏರುಮುಖವಾಗಿದ್ದು ಕೆಪಿಸಿಗೆ ಆತಂಕ ತಂದಿದೆ.
ಮುಂಗಾರು ಆಗಮನಕ್ಕೂ ಮುನ್ನವೇ ಮಳೆಯ ಕೊರತೆಯನ್ನು ಹವಾಮಾನ ತಜ್ಞರು ಅಂದಾಜಿಸಿದ್ದರು. ಅದರಂತೆಯೇ ಮಳೆಯ ಕೊರತೆ ಎದುರಾಗಿದ್ದು, ಕೃಷಿ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತಿದೆ. ಕೃಷಿಗೆ ಸಜ್ಜಾಗಿದ್ದ ರೈತರು ಕೈಚೆಲ್ಲಿ ಕುಳಿತಿದ್ದಾರೆ. ನೀರಾವರಿ ಪ್ರದೇಶದಲ್ಲಿ ಪಂಪ್ ಸೆಟ್ ಗಳ ಮೂಲಕ ಕೃಷಿಗೆ ವಿದ್ಯುತ್ ಬಳಕೆ ತೀವ್ರಗೊಂಡಿದ್ದು ದೈನಂದಿನ ವಿದ್ಯುತ್ ಬಳಕೆ ಪ್ರಮಾಣ ಗಣನೀಯ ಏರಿಕೆ ಕಂಡಿದೆ.
ಮುಂಗಾರು ವೈಫಲ್ಯ=
ಕಳೆದ ಬೇಸಿಗೆಯ ಕೊನೆಗೆ ಧಾರಾಕಾರ ಮಳೆಯಾಗಿ ರೈತರು ಉತ್ತಮ ಮುಂಗಾರಿನ ನಿರೀಕ್ಷೆ ಗರಿಗೆದರಿತ್ತು. ಆದರೆ ಮುಂಗಾರು ಚುರುಕುಗೊಂಡಿದೆ ಎನ್ನುವಷ್ಟರಲ್ಲಿಯೇ ಹವಾಮಾನದಲ್ಲಿ ಏರಿಳಿತವಾಗಿ ಎಲ್ ನಿನೋ ಎಂಬ ಭೂತ ವಕ್ಕರಿಸಿದ್ದು, ಮಳೆಯ ಮೋಡಗಳು ಕರಗಿ ಮಳೆಯಾಗದೇ ಆತಂಕ ತಂದಿದೆ.
ರಾಜ್ಯದಲ್ಲಿ ಮುಂಗಾರು ಮಳೆ ಬಹುತೇಕ ಕೈಕೊಟ್ಟಿದ್ದು, ಭವಿಷ್ಯದ ಬಗ್ಗೆಯೂ ಹವಾಮಾನ ತಜ್ಞರು ಮಳೆಯಾಗುವ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಈ ನಂತರ ಮಳೆ ಸುರಿದರೂ ಕೃಷಿಗೆ ಪೂರಕವಾಗುವ ಲಕ್ಷಣಗಳಿಲ್ಲ. ಪರಿಣಾಮ ಮಳೆಯಾಧಾರಿತ ಪ್ರದೇಶದಲ್ಲಿ ಕೃಷಿ ಕಾರ್ಯ ಬಹುತೇಕ ಸ್ಥಗಿತಗೊಳ್ಳುವ ಹಂತಕ್ಕೆ ಬಂದಿದೆ.
ಬೇಡಿಕೆ ಏರುಮುಖ
ರಾಜ್ಯದಲ್ಲಿ ಮುಂಗಾರು ಮಳೆಯ ವೈಫಲ್ಯದಿಂದ ಕೃಷಿ ಕ್ಷೇತ್ರದಲ್ಲಿ ಆತಂಕ ಸೃಷ್ಟಿಯಾಗಿದೆ. ಕೊಳವೆಬಾವಿಗಳ ಮೂಲಕ ನೀರಾವರಿ ಸೌಲಭ್ಯ ಹೊಂದಿರುವ ರೈತರು ಇದೀಗ ಅನಿವಾರ್ಯವಾಗಿ ಮಳೆಯಾಗದ್ದಕ್ಕೆ ವಿದ್ಯುತ್ ಬಳಸಿ ಪಂಪ್‌ಸೆಟ್‌ಗಳ ಮೂಲಕ ಕೃಷಿ ಗೆ ನೀರು ಹರಿಸಿಕೊಳ್ಳತೊಡಗಿದ್ದಾರೆ. ರಾಜ್ಯದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚಿನ ನೀರೆತ್ತುವ ಮೋಟಾರ್‌ಗಳಿದ್ದು ಬಹುತೇಕರು ಈ ನೀರಾವರಿ ಆಸರೆ ಪಡೆದಿದ್ದಾರೆ.
ಪರಿಣಾಮ ರಾಜ್ಯದಲ್ಲಿ ಬೇಸಿಗೆಯಲ್ಲಿದ್ದಂತೆಯೇ ವಿದ್ಯುತ್ ಬಳಕೆ ಜೂನ್ ಎರಡನೇ ವಾರದಿಂದಲೇ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಬಿರುಬೇಸಿಗೆಯ ದಿನಗಳಲ್ಲಿ 18 ಸಾವಿರ ಮೆವಾ ವರೆಗೆ ಏರಿಕೆಯಾಗಿದ್ದ ವಿದ್ಯುತ್ ಬಳಕೆ ಪ್ರಮಾಣವು ಮುಂಗಾರು ಹಂಗಾಮಿನಲ್ಲಿ 15ಸಾವಿರ ಮೆವಾ ವರೆಗೆ ಬಂದು ತಲುಪಿದೆ. ಹೀಗಾಗಿ ಥರ್ಮಲ್ ವಿದ್ಯುತ್ ಘಟಕಗಳ ಮೇಲೆಯೇ ಒತ್ತಡ ಹೆಚ್ಚಿದೆ. ಸದ್ಯ ರಾಜ್ಯದಲ್ಲಿ 3200 ಮೆವಾ ಥರ್ಮಲ್ ನಿಂದ ದೊರೆಯುತ್ತಿದೆ. ಪವನ ವಿದ್ಯುತ್ ನಿಂದ 3300 ಮೆವಾ ಹಾಗೂ ಸೌರಶಕ್ತಿಯಿಂದ 4900 ಮೆವಾ ಉತ್ಪಾದನೆಯಾಗುತ್ತಿದೆ.
ನೀರಿನ ಅಭಾವ=
ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನೆ ಕೇಂದ್ರಗಳಿಗೆ ನೀರಿನ ಕೊರತೆಯಾಗಿದೆ. ಮುಂಗಾರು ಸಮರ್ಪಕವಾಗಿ ಸುರಿಯದ್ದರಿಂದ ಜಲ ವಿದ್ಯುತ್ ಉತ್ಪಾದನೆ ಕೇಂದ್ರಗಳಿಗೆ ನೀರಿಲ್ಲವಾಗಿದೆ. ಪರಿಣಾಮ ರಾಜ್ಯದಲ್ಲಿ ಸದ್ಯ ಕೇವಲ 480ಮೆವಾ ಜಲವಿದ್ಯುತ್ ರಾಜ್ಯಕ್ಕೆ ಲಭ್ಯವಾಗುತ್ತಿದೆ. ಮುಂಗಾರು ಚುರುಕುಗೊಂಡು ಜಲಾಶಯಗಳು ಭರ್ತಿಯಾದರೆ ಮಾತ್ರ ಜಲ ವಿದ್ಯುತ್ ಉತ್ಪಾದನೆ ಚೇತರಿಸಿಕೊಳ್ಳಲಿದ್ದು, ಇದಾಗದಿದ್ದರೆ ರಾಜ್ಯಕ್ಕೆ ಥರ್ಮಲ್ ಘಟಕಗಳೇ ಆಸರೆಯಾಗಬೇಕಾಗಲಿದೆ. ಹಾಗಾದರೆ ಬೇಸಿಗೆಯಲ್ಲಿ ನಿರಂತರ ವಿದ್ಯುತ್ ಉತ್ಪಾದನೆಯಿಂದ ಬಸವಳಿದಿರುವ ಥರ್ಮಲ್ ಘಟಕಗಳ ನಿರ್ವಹಣೆಗೂ ಅವಕಾಶವಿಲ್ಲದಂತಾಗಲಿದೆ.
ಹವಾಮಾನದಲ್ಲಿ ಏರಿಳಿತವಾಗಿ ಎಲ್ ನಿನೋ ಎಫೆಕ್ಟ್ ನಿಂದ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನೆ ಕೇಂದ್ರಗಳಿಗೆ ನೀರಿನ ಕೊರತೆಯಾಗಿ ಉತ್ಪಾದನೆ ಕೊರತೆ ಎದುರಾಗಿದ್ದು, ಇದರಿಂದ ಥರ್ಮಲ್ ಘಟಕಗಳು ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಮಳೆಯಾದರೆ ಉತ್ಪಾದನೆ ಕಡಿಮೆಯಾಗಲಿದೆ.
ರಮೇಶ ಎಚ್.ಆರ್. ಇಡಿ ಆರ್‌ಟಿಪಿಎಸ್ ಶಕ್ತಿನಗರ