ದೇವದುರ್ಗದ ತಾಲೂಕು ಆಡಳಿತಸೌಧ ಕಚೇರಿ ಹೊರನೋಟ.
- ದೇವದುರ್ಗ ತಾಲೂಕಿನಲ್ಲಿ ಉಳಿಯಲು ಶತಪ್ರಯತ್ನ
- ವರದಿ ಕೇಳಿದ ಜಿಲ್ಲಾಧಿಕಾರಿ
ದೇವದುರ್ಗ: ಅರಕೇರಾ ತಾಲೂಕು ಸೇರಲು ಒಪ್ಪದ ಎಂಟು ಗ್ರಾಪಂಗಳು ರಾಜ್ಯ ಸರ್ಕಾರದ ನಿರ್ಧಾರ ವಿರುದ್ಧ ಸಿಡಿದೆದ್ದು ನಡೆಸಿದ ಹೋರಾಟಕ್ಕೆ ಅಲ್ಪಮುನ್ನಡೆ ಸಿಕ್ಕಂತಾಗಿದೆ. ಈ ಗ್ರಾಪಂಗಳನ್ನು ಮರಳಿ ದೇವದುರ್ಗಕ್ಕೆ ಸೇರಿಸುವ ಬಗ್ಗೆ ಎರಡು ತಾಲೂಕಿನ ತಹಸೀಲ್ದಾರ್‌ಗೆ ಪತ್ರ ಬರೆದಿರುವ ಜಿಲ್ಲಾಧಿಕಾರಿ, ಸಾಧಕ ಬಾಧಕ ವರದಿ ಕೇಳಿದ್ದಾರೆ. ಇದರಿಂದ ಗ್ರಾಪಂಗಳು ಮರಳಿ ಗೂಡಿಗೆ ಸೇರುವ ಶತಪ್ರಯತ್ನಕ್ಕೆ ರೆಕ್ಕೆಪುಕ್ಕ ಬಂದಿವೆ.
ಅಖಂಡ ದೇವದುರ್ಗ ತಾಲೂಕು ಒಡೆದು ಅರಕೇರಾ ತಾಲೂಕು ರಚನೆ ಮಾಡಿದ ನಂತರ ಸರ್ಕಾರ ಹಾಗೂ ಅಧಿಕಾರಿಗಳ ಅವೈಜ್ಞಾನಿಕ ನಿರ್ಧಾರ ಖಂಡಿಸಿ ಜನರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಮೊದಲು ಅಖಂಡ ದೇವದುರ್ಗ ಉಳಿಸಲು ಹೋರಾಟಕ್ಕೆ ರಾಜಕೀಯ ಹಾಗೂ ಸರ್ಕಾರದ ನಿರ್ಧಾರದಿಂದ ಹಿನ್ನಡೆಯಾಗಿತ್ತು. ಎರಡನೇ ಹಂತವಾಗಿ ಅರಕೇರಾ ತಾಲೂಕು ಸೇರಲ್ಲ ಎನ್ನುವ ಕಾನೂನು ಹೋರಾಟ ಆರಂಭಿಸಲಾಗಿತ್ತು. ಇದರ ಭಾಗವಾಗಿ ಎಂಟು ಗ್ರಾಪಂಗಳು ದೇವದುರ್ಗ ತಾಲೂಕಿನಲ್ಲೇ ಉಳಿಯಲು ನಿರ್ಧರಿಸಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಿದ್ದವು.
ಅಲ್ಲದೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮನವಿ ಸಲ್ಲಿಸಿ ಒತ್ತಡ ಹಾಕಿದ್ದವು. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ನಿತೀಶ ಕೆ.ಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಆದೇಸಿದ್ದರು. ಹೀಗಾಗಿ ದೇವದುರ್ಗ ಹಾಗೂ ಅರಕೇರಾ ತಹಸೀಲ್ದಾರ್‌ಗೆ ಪತ್ರ ಬರೆದಿರುವ ಜಿಲ್ಲಾಧಿಕಾರಿ , ಸಹಾಯಕ ಆಯುಕ್ತರ ಮಾರ್ಗದರ್ಶನದಲ್ಲಿ 8ಗ್ರಾಪಂಗಳ ಸಾಧಕ ಬಾಧಕ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಮಾಡಿರುವ ಆದೇಶ ಎಂಟು ಗ್ರಾಪಂಗಳಿಗೆ ಹೊಸ ಹುಮ್ಮಸ್ಸು ತಂದುಕೊಟ್ಟಿದ್ದು ಹೋರಾಟ ಮಗ್ಗಲು ಬದಲಿಸುವ ಸಾಧ್ಯತೆ ದಟ್ಟವಾಗಿದೆ. ಹೊಸ ತಾಲೂಕಿನಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡುವ ಪ್ರಯತ್ನ ನಡೆದಿದೆ. ಹೋರಾಟಕ್ಕೆ ಮೊದಲ ಹಂತದಲ್ಲಿ ಯಶಸ್ಸು ಸಿಕ್ಕಿದ್ದು, ಮರಳಿ ಗೂಡಿಗೆ ಸೇರಲು ಪ್ರಯತ್ನ ನಡೆಸಿವೆ. 8 ಗ್ರಾಪಂಗಳು ಹೊರಬಂದರೆ ಅರಕೇರಾ ತಾಲೂಕು ಅಳಿವು ಉಳಿವಿನ ಪ್ರಶ್ನೆ ಎದುರಾಗಲಿದೆ.
ಆದೇಶದಲ್ಲಿ ಏನಿದೆ ?
ದೇವದುರ್ಗ ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ಅರಕೇರಾ ತಹಸೀಲ್ದಾರ್ ಅಮರೇಶ ಬಿರಾದಾರ್‌ಗೆ ಜಿಲ್ಲಾಧಿಕಾರಿ ಬರೆದ ಪತ್ರದಲ್ಲಿ ಹಲವು ಅಂಶಗಳ ವರದಿ ಕೇಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಅಭಿಪ್ರಾಯದ ಟಿಪ್ಪಣಿ ಸಲ್ಲಿಸಬೇಕು. ಎಂಟು ಗ್ರಾಪಂಗಳು ಹೊಸ ತಾಲೂಕಿನಿಂದ ಎಷ್ಟು ದೂರದಲ್ಲಿವೆ ಎನ್ನುವ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ಪ್ರಮಾಣಪತ್ರ ಪಡೆದು ಸಲ್ಲಿಸಬೇಕು. ಯಾವ ಹೋಬಳಿ ಕೇಂದ್ರಕ್ಕೆ ಒಳಪಟ್ಟಿವೆ ಮತ್ತು ಆ ಹೋಬಳಿಯಿಂದ ಗ್ರಾಪಂಗಳಿಗೆ ಇರುವ ದೂರದ ಬಗ್ಗೆ ಪಿಡಬ್ಲ್ಯುಡಿಯಿಂದ ಪ್ರಮಾಣಪತ್ರ ಪಡೆದು ಸಲ್ಲಿಸಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಪಂಗಳ ಸಭಾ ನಡಾವಳಿ ಸಲ್ಲಿಸುವುದು. ಈ 8 ಗ್ರಾಪಂಗಳನ್ನು ದೇವದುರ್ಗ ತಾಲೂಕಿಗೆ ಸೇರಿಸಿದರೆ ಅರಕೇರಾ ತಾಲೂಕಿನಲ್ಲಿ ಉಳಿಯುವ ಗ್ರಾಮಗಳ ವಿವರ ಸಲ್ಲಿಸಬೇಕು. ಸಾರಿಗೆ ಸಂಪರ್ಕ ವ್ಯವಸ್ಥೆ ಸೇರಿ ಇತರ ಸೌಲಭ್ಯ ಮಾಹಿತಿ ನೀಡಬೇಕು. ಭೌಗೋಳಿಕ, ಆಡಳಿತಾತ್ಮಕ ವಿಷಯ ಕುರಿತು ಸಾರ್ವಜನಿಕ ಹಿತದೃಷ್ಟಿಯಿಂದ ತಮ್ಮಲ್ಲೆ ವಿಶ್ಲೇಷಿಸಿ ಸ್ಪಷ್ಟ ಅಭಿಪ್ರಾಯ ದಾಖಲಿಸಿ ರಾಯಚೂರು ಸಹಾಯಕ ಆಯುಕ್ತರ ಮೂಲಕ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ.
ಯಾವ ಪಂಚಾಯಿತಿಗಲು ಸೇರ್ಪಡೆ ?
ಈ ಹಿಂದೆ 2023ರಲ್ಲಿ ಹಿಂದಿನ ಬಿಜೆಪಿ ಸರ್ಕಾರ ಅಖಂಡ ದೇವದುರ್ಗ ತಾಲೂಕು ಒಡೆದು ಅರಕೇರಾ ತಾಲೂಕು ರಚಿಸಿತ್ತು. ದೇವದುರ್ಗ ತಾಲೂಕಿಗೆ 15 ಗ್ರಾಪಂಗಳು ಹಾಗೂ ಅರಕೇರಾ ತಾಲೂಕಿಗೆ 18 ಗ್ರಾಪಂಗಳನ್ನು ಹಂಚಿಕೆ ಮಾಡಲಾಗಿತ್ತು. ಅರಕೇರಾ ತಾಲೂಕಿನಿಂದ ಆಗುವ ಸಮಸ್ಯೆ ಬಗ್ಗೆ ಸಿಡಿದೆದ್ದ ರಾಮದುರ್ಗ, ಮಲದಕಲ್, ಗಾಣಧಾಳ, ಪಲಕನಮರಡಿ, ಸೋಮನಮರಡಿ, ಕೊತ್ತದೊಡ್ಡಿ, ಮುಂಡರಗಿ, ಹೊಸೂರು ಸಿದ್ದಾಪುರ ಗ್ರಾಪಂಗಳು ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್‌ಮಾಡಿ ದೇವದುರ್ಗ ತಾಲೂಕಿನಲ್ಲೇ ಮುಂದುವರಿಯಲು ನಿರ್ಧರಿಸಿದ್ದವು. ಈ 8 ಗ್ರಾಪಂಗಳು ದೇವದುರ್ಗ ತಾಲೂಕು ಸೇರ್ಪಡೆಯಾಗುವ ಸಾಧ್ಯತೆಯಿದೆ.
"
ಅರಕೇರಾ ತಾಲೂಕಿನ ಕೆಲ ಗ್ರಾಪಂ ವ್ಯಾಪ್ತಿಯ ಜನರು ನಮ್ಮನ್ನು ದೇವದುರ್ಗ ತಾಲೂಕಿನಲ್ಲೇ
ಮುಂದುವರಿಸಲು ಒತ್ತಾಯಿಸಿ ನನಗೆ ಮನವಿ ಸಲ್ಲಿಸಿದ್ದಾರೆೆ. ಈ ಬಗ್ಗೆ ಪರಿಶೀಲಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ಕಾನೂನು ಪ್ರಕಾರ ಕ್ರಮವಹಿಸಲು ತಿಳಿಸಿದ್ದೇನೆ.
— ಡಾ.ಶರಣಪ್ರಕಾಶ ಪಾಟೀಲ್ ಜಿಲ್ಲಾ ಉಸ್ತುವಾರಿ ಸಚಿವ, ರಾಯಚೂರು
"
ಎಂಟು ಗ್ರಾಪಂಗಳು ದೇವದುರ್ಗ ತಾಲೂಕಿನಲ್ಲೇ ಉಳಿಯಲು ಸಾಮಾನ್ಯ ಸಭೆಯಲ್ಲಿ ಠ
ರಾವು ಪಾಸ್ ಮಾಡಿವೆ. ಈ ಗ್ರಾಪಂಗಳ ವ್ಯಾಪ್ತಿಯ ಸ್ಥಿತಿಗತಿ ಸೇರಿ ವಿವಿಧ ಅಂಶಗಳನ್ನು ಪಟ್ಟಿ ಮಾಡಿ ವರದಿ ಸಲ್ಲಿಸಲು ಅಪರ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಪರಿಶೀಲಿಸಿ ವರದಿ ನೀಡಲಾಗುವುದು.
— ನಾಗಮ್ಮ ಕಟ್ಟಿಮನಿ ತಹಸೀಲ್ದಾರ್
ಅಖಂಡ ದೇವದುರ್ಗ ತಾಲೂಕನ್ನು ರಾಜಕೀಯ ಸ್ವಾರ್ಥಕ್ಕೆ ಒಡೆದು ಅವೈಜ್ಞಾನಿಕವಾಗಿ ಅರಕೇರಾ ರಚನೆ ಮಾಡಿದ್ದಾರೆ. ಇದರಿಂದ ಹಲವು ಗ್ರಾಪಂಗಳಿಗೆ ಸಮಸ್ಯೆಯಾಗುತ್ತಿದೆ. ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೂ ಪತ್ರ ಬರೆದು ಎಂಟು ಗ್ರಾಪಂಗಳನ್ನು ದೇವದುರ್ಗದಲ್ಲಿ ಉಳಿಸಲು ಒತ್ತಾಯಿಸಿದ್ದೇವೆ. ಅಖಂಡತೆಗಾಗಿ ಹೋರಾಟ ಮುಂದುವರಿಯಲಿದೆ.
— ಶಿವರಾಜ ನಾಯಕ ಕೊತ್ತದೊಡ್ಡಿ ಸಂಚಾಲಕ, ಅಖಂಡ ದೇವದುರ್ಗ ಹೋರಾಟ ಸಮಿತಿ