ಸಿರವಾರದ ಬಸವ ವೃತ್ತದಲ್ಲಿ ಮುಖ್ಯರಸ್ತೆ ನಿರ್ಮಾಣ ಕಾಮಗಾರಿಗೆ ಸಚಿವ ಎನ್.ಎಸ್.ಭೋಸರಾಜು ಹಾಗೂ ಶಾಸಕ ಜಿ.ಹಂಪಯ್ಯ ನಾಯಕ ಭೂಮಿಪೂಜೆ ನೆರವೇರಿಸಿದರು.
- ಸಚಿವ ಎನ್.ಎಸ್.ಬೋಸರಾಜು ಹೇಳಿಕೆ
- ಬಹುಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ
ಸಿರವಾರ: ಸಾರ್ವಜನಿಕರಿಗೆ ಅನುಕೂಲವಾಗುವಂತೆ ಒಂದೇ ಪ್ರದೇಶದಲ್ಲಿ ಪ್ರಜಾಸೌಧ, ಕ್ರೀಡಾಂಗಣ, ಕೋರ್ಟ್ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳನ್ನು ಸ್ಥಾಪಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಪಟ್ಟಣದಲ್ಲಿ 15 ಕೋಟಿ ರೂ.ವೆಚ್ಚದ ಮುಖ್ಯ ರಸ್ತೆ ಕಾಮಗಾರಿ, 8.6 ಕೋಟಿ ರೂ. ವೆಚ್ಚದ ಪ್ರಜಾಸೌಧ ಕಟ್ಟಡ, 3 ಕೋಟಿ ರೂ. ವೆಚ್ಚದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಕಟ್ಟಡ, 4 ಕೋಟಿ ರೂ. ವೆಚ್ಚದ ತಾಲೂಕು ಕ್ರೀಡಾಂಗಣ, 3 ಕೋಟಿ ರೂ. ವೆಚ್ಚದ ಅಗ್ನಿಶಾಮಕ ಠಾಣೆ, 2 ಕೋಟಿ ರೂ. ವೆಚ್ಚದ ವಾಲ್ಮಿಕಿ ಭವನ, 50 ಲಕ್ಷ ರೂ. ವೆಚ್ಚದ ಹೈಟೆಕ್ ಗ್ರಂಥಾಲಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ಸರ್ಕಾರ ಹೊಸದಾಗಿ ಎಲ್‌ಕೆಜಿಯಿಂದ ಪಿಯುವರೆಗೆ ಆಂಗ್ಲ ಭಾಷೆ ಶಾಲೆ ಆರಂಭ ಮಾಡಲಿದೆ. ಈ ಭಾಗಕ್ಕೆ ಹೆಚ್ಚಿನ ಶಾಲೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗುವುದು. ಕಲ್ಲೂರು ಭಾಗದಲ್ಲಿ ಇರುವ ವಸತಿ ಶಾಲೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಕಲ್ಲೂರಿನಲ್ಲೇ ಹೊಸ ಕಟ್ಟಡ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಲಾಗಿದೆ. ಮಾದರಿ ತಾಲೂಕು ಕೇಂದ್ರವನ್ನಾಗಿಸಲು ಶ್ರಮಿಸಲಾಗುವುದು. 9ಎ ಕಾಲುವೆ ವಿಸ್ತರಿಸುವುದು, ಕೆರೆಗಳು, ಚೆಕ್ ಡ್ಯಾಂ ನಿರ್ಮಾಣ, ಮಳೆ ನೀರು ಇಂಗಿಸುವುದು, ನಾಲೆಗಳ ದುರಸ್ತಿ ಸೇರಿದಂತೆ ಅವಶ್ಯಕವಾದ ಯೋಜನೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ರೂಪಿಸಲಾಗುವುದು ಎಂದರು.
ಶಾಸಕ ಜಿ.ಹಂಪಯ್ಯ ನಾಯಕ, ಎನ್.ಗಿರಿಜಾ ಶಂಕರ ಮಾತನಾಡಿದರು. ಪಪಂ ಅಧ್ಯಕ್ಷ ವೈ.ಭೂಪನಗೌಡ, ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬ್ರಿಜೇಶ ಪಾಟೀಲ್, ಮುಖಂಡರಾದ ಚುಕ್ಕಿ ಸೂಗಪ್ಪ ಸಾಹುಕಾರ, ವೈ. ಶರಣಪ್ಪ ನಾಯಕ ಗುಡದಿನ್ನಿ, ಮಲ್ಲಿಕಾರ್ಜುನ ಗೌಡ ಯದ್ದಲದಿನ್ನಿ, ಬಿ.ಕೆ.ಅಮರೇಶಪ್ಪ, ನಿರ್ಮಲಾ ಬೆಣ್ಣೆ, ರೇಣುಕಾ, ಚುಕ್ಕಿ ಶಿವಕುಮಾರ, ರಮೇಶ ದರ್ಶನಕರ್, ಶಿವಶರಣ ಸಾಹುಕಾರ್ ಅರಕೇರಿ, ದಾನನಗೌಡ, ಬಂಡೆಯ್ಯ ಸ್ವಾಮಿ ಚಿಂಚರಕಿ, ಭೀಮರಡ್ಡಿ ಕಲ್ಲೂರು, ಬಸವರಾಜ ಗೌಡ ಅತ್ತನೂರು, ಎಚ್.ಕೆ.ಅಮರೇಶ, ಅಬ್ರಾಹಂ ಹೊನ್ನುಟಗಿ, ಜಯಪ್ಪ ಕೆಂಪು ಇತರರಿದ್ದರು.
ಜಿಲ್ಲಾ ಉಸ್ತುವಾರಿ ಹೆಸರು ಮಾಯ
ಬಹುಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ ಪಾಟೀಲ್ ಅವರ ಹೆಸರು, ಭಾವಚಿತ್ರ ಸಹ ಹಾಕದೆ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಂತಾಗಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.