ಸಿಂಧನೂರು ವಿಸಿಬಿ ಪದವಿ ಪೂರ್ವ ಹಾಗೂ ನ್ಯಾಷನಲ್ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಚರ್ಚಾ ಸ್ಪರ್ಧೆ ಕಾರ್ಯಕ್ರಮವನ್ನು ಡಿವೈಎಸ್ಪಿ ಜಿ.ಚಂದ್ರಶೇಖರ ಉದ್ಘಾಟಿಸಿದರು. ನಗರ ಠಾಣೆ ಸಿಪಿಐ ವೀರಾರೆಡ್ಡಿ, ಪಾಟೀಲ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಆರ್.ಸಿ.ಪಾಟೀಲ್, ಪ್ರಾಚಾರ್ಯರಾದ ರಾಮಲಿಂಗಯ್ಯ, ನಾಗರಾಜ ಪತ್ತಾರ ಇದ್ದರು.
- ಚರ್ಚಾ ಸ್ಪರ್ಧೆ
- ಜ್ಞಾನ
- ಮಾರ್ಗ
ಸಿಂಧನೂರು: ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗದೆ ಜ್ಞಾನದ ಮಾರ್ಗದ ಕಡೆಗೆ ಮುನ್ನಡೆಯಬೇಕು ಎಂದು ಡಿವೈಎಸ್ಪಿ ಜಿ.ಚಂದ್ರಶೇಖರ ಹೇಳಿದರು.
ನಗರದ ವಿಸಿಬಿ ಪದವಿ ಪೂರ್ವ ಹಾಗೂ ನ್ಯಾಷನಲ್ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಜಿಲ್ಲಾ ಪೊಲೀಸ್, ಪೊಲೀಸ್ ಅಧೀಕ್ಷಕರ ಕಚೇರಿ ಸಿಂಧನೂರು ಸಹಯೋಗದಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಬುಧವಾರ ನಡೆದ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಸಾಧ್ಯವೇ? ವಿಷಯದ ಕುರಿತು ಚರ್ಚಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾದಕ ವ್ಯಸನವು ಯುವಜನತೆಗೆ ಮಾರಕವಾಗಿದೆ. ಜ್ಞಾನಿಗಳಾಗುವುದು ಮತ್ತು ದುಶ್ಚಟದಿಂದ ದೂರವಿರುವುದು ಮಾತ್ರ ವ್ಯಕ್ತಿಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ನಗರ ಪೊಲೀಸ್ ಠಾಣೆ ಸಿಪಿಐ ವೀರಾರೆಡ್ಡಿ ಮಾತನಾಡಿ, ಸೈಬರ್ ಅಪರಾಧ, ಅಕ್ರಮ ಚಟುವಟಿಕೆಗಳ ಕುರಿತಂತೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಮೊಬೈಲ್ ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ಕಾನೂನು ಬಾಹಿರ ಚಟುವಟಿಕೆಗಳು ಕಂಡರೆ ಪೊಲೀಸ್ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಪಾಟೀಲ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಆರ್.ಸಿ.ಪಾಟೀಲ್ ಮಾತನಾಡಿ, ದುಶ್ಚಟಕ್ಕೆ ಬಲಿಯಾದರೆ ಚಟಗಳೇ ಜೀವಕ್ಕೆ ಆಪತ್ತು ತರಲಿವೆ. ಯುವಕರು ಎಚ್ಚರದಿಂದ ಇರಬೇಕು ಎಂದರು. ಶ್ರೀ ವಿಸಿಬಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಚಂದ್ರಶೇಖರ ಬೆನ್ನೂರು, ಪ್ರಾಚಾರ್ಯರಾದ ಎಚ್.ರಾಮಲಿಂಗಯ್ಯ, ನಾಗರಾಜ ಪತ್ತಾರ, ಉಪನ್ಯಾಸಕ ವಿಜಯಕುಮಾರ ನಾಡಗೌಡ ಇದ್ದರು.
ಚರ್ಚೆ ವೀಕ್ಷಿಸಿದ ಡಿವೈಎಸ್ಪಿ: 1 ಗಂಟೆಗೂ ಹೆಚ್ಚು ಕಾಲ ನಡೆದ ಚರ್ಚೆಯನ್ನು ಡಿವೈಎಸ್ಪಿ ಜಿ.ಚಂದ್ರಶೇಖರ ಹಾಗೂ ಸಿಪಿಐ ವೀರಾರೆಡ್ಡಿ ವೀಕ್ಷಿಸಿದರು. ಡಿವೈಎಸ್ಪಿ ಚಂದ್ರಶೇಖರ ಸ್ಪರ್ಧೆಯ ಕೊನೆಯವರೆಗೂ ಕುಳಿತು ವಿದ್ಯಾರ್ಥಿಗಳು ಮಾತುಗಳನ್ನು ಆಲಿಸಿದ್ದು ವಿಶೇಷವಾಗಿತ್ತು. ಡಿ.12 ರಂದು ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಅವರಿಂದ ನಗದು ಬಹುಮಾನ ವಿತರಿಸಲಾಗುವುದು ಎಂದರು.