ತಾಲೂಕಿನ ಜಾಲಿಬೆಂಚಿ ಗ್ರಾಮಸ್ಥರು ಮಳೆಗಾಗಿ ಸಪ್ತ ಭಜನೆ ಆರಂಭಿಸಿರುವುದು. 
ರಾಯಚೂರು

ಜಿಲ್ಲೆಯಲ್ಲಿ ಬರಗಾಲ ಛಾಯೆ: ಮಳೆಗಾಗಿ ರೈತರಿಂದ ಸಪ್ತ ಭಜನೆ, ದೇವರ ಪ್ರಾರ್ಥನೆ

ರಾಯಚೂರು ಬಿಸಿಲನಾಡು ಹೆಸರಿಗೆ ಪಾತ್ರರಾಗಿರುವ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಕೈ ಕೊಟ್ಟಿದ್ದು, ಸಂಪೂರ್ಣ ಬರಗಾಲ ಛಾಯೆ ಆವರಿಸಿದೆ. ಬಿತ್ತಿದ ಬೆಳೆ ನೀರಿಲ್ಲದೇ ಜಮೀನಿನಲ್ಲಿ ಒಣಗಿ ಹೋಗುತ್ತಿದೆ. ಹೀಗಾಗಿ ಜಿಲ್ಲೆಯ ರೈತರು ದೇವರ ಮೊರೆ ಹೋಗುತ್ತಿದ್ದು, ಮಳೆಗಾಗಿ ಸಪ್ತ ಭಜನೆ ಮಾಡುತ್ತಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಬಹುತೇಕ ಮುಂಗಾರು ಕೈ ಕೊಟ್ಟಂತೆ ಕಾಣುತ್ತಿದೆ. ಬಹು ನಿರೀಕ್ಷೆ ಇಟ್ಟುಕೊಂಡಿದ್ದ ಜಿಲ್ಲೆಯ ಅನ್ನದಾತರಂತೂ ಮಳೆಯಿಲ್ಲದೆ ಪುನಃ ಸಾಲಗಾರರಾಗುವ ಆತಂಕ ಎದುರಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಖರ್ಚು ಮಾಡಿ ಹತ್ತಿ , ಮೆಣಸಿನಕಾಯಿ,ತೋಗರಿ ಬಿತ್ತನೆ ಮಾಡಿರುವ ರೈತರು ಮಳೆಗಾಗಿ ಕಾಯುತ್ತಿದ್ದಾರೆ.
ತಾಲೂಕಿನ ಜಾಲಿಬೆಂಚಿ ಗ್ರಾಮಸ್ಥರು ಮಳೆಗಾಗಿ ಸಪ್ತ ಭಜನೆ ಆರಂಭಿಸಿದ್ದಾರೆ. ಏಳುದಿನಗಳ ಕಾಲ 12 ತಂಡಗಳಾಗಿ ಸತತ 24 ಗಂಟೆ ಭಜನೆ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿ ವರುಣದೇವನ ಆಗಮನಕ್ಕೆ ಕಾಯುತ್ತಿದ್ದಾರೆ.
ನಿತ್ಯ ತುಂಗಭದ್ರಾ ,ಕೃಷ್ಣಾ ಎರಡು ನದಿಗಳ ನೀರು ತಂದು ನಿರಂತರ ಜಲಾಭೀಷೇಕ ಮಾಡುತ್ತಿದ್ದು, ಗ್ರಾಮದ ಪಾರ್ವತಿ ಪರಮೇಶ್ವರ ದೇವಾಲಯ, ಆಂಜನೇಯ ದೇವಾಲಯಗಳಿಗೆ ನಿರಂತರ ಪ್ರದಕ್ಷಣೆ ಹಾಕುವ ಮೂಲಕ ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ಸಪ್ತ ಭಜನೆ ಮಾಡಿದ ಬಳಿಕ ಉತ್ತಮ ಮಳೆ ಬಂದಿದ್ದರಿಂದ, ಈ ಬಾರಿಯೂ ಅದೇ ನಿರೀಕ್ಷೆಯಲ್ಲಿ ಮಳೆಗಾಗಿ ಭಜನೆ ,ಪ್ರಾರ್ಥನೆ ಮಾಡುತ್ತಿದ್ದಾರೆ.
ಮಳೆಯಿಲ್ಲದೆ ಈ ಬಾರಿ ಕೇವಲ ಶೇ. 20 ರಷ್ಟು ಮಾತ್ರ ಬಿತ್ತನೆಯಾಗಿದೆ. ಹತ್ತಿ, ಮೆಣಸಿನಕಾಯಿ ನಾಟಿದ ಬೆಳೆ ನೀರಿಲ್ಲದೆ ಒಣಗಿ ಹೋಗುತ್ತಿದೆ. ನೀರಾವರಿ ,ಬೋರ್‌ವೆಲ್ ಮಾಡಿಕೊಂಡ ರೈತರಿಗೆ ರಸಗೊಬ್ಬರ ಸಿಗುತ್ತಿಲ್ಲ, ಕಳಪೆ ಬೀಜ ಹಾವಳಿ ಜೋರಾಗಿದೆ. ಇದರ ಬಗ್ಗೆ ಸರ್ಕಾರ ಯಾವುದೇ ಚಿಂತನೆ ಮಾಡುತ್ತಿಲ್ಲ ಅಂತ ರೈತರು ಅಸಮಧಾನಗೊಂಡಿದ್ದಾರೆ.
ಗ್ರಾಮೀಣ ಭಾಗದ ಜನ ಮಳೆಯಿಲ್ಲದೆ ಈಗಾಗಲೇ ಗುಳೆ ಆರಂಭಿಸಿದ್ದಾರೆ. ಮೋಡ ಬಿತ್ತನೆಯಿಂದ ಮಳೆ ತರಿಸುವ ಪ್ರಯತ್ನ ಮಾಡಿದರೆ ಅನುಕೂಲವಾಗುತ್ತೆ. ಬರಗಾಲ ಘೋಷಣೆ ಮಾಡಿ ಪರಿಹಾರ ಕೊಡಬೇಕು. ಉದ್ಯೋಗ ಖಾತ್ರಿ ಕೆಲಸ ಮುಂದುವರೆಸಿ ಕೃಷಿ ಕೂಲಿಕಾರರಿಗೆ ಕೆಲಸ ಕೊಡುವಂತದ್ದಕ್ಕೆ ಸರ್ಕಾರ ಮುಂದಾಗಬೇಕೆಂದು ರೈತರು ಒತ್ತಾಯಿಸಿದ್ದಾರೆ.