ಮಸ್ಕಿ ಪುರಸಭೆ ಕಚೇರಿಯಲ್ಲಿ ಆಡಳಿತ ಮಂಡಳಿ ಸದಸ್ಯರ ಸಭೆ ನಡೆಯಿತು. ಅಧ್ಯಕ್ಷ ಸುರೇಶ ಹರಸೂರು, ಉಪಾಧ್ಯಕ್ಷೆ ಗೀತಾ ಶಿವರಾಜ, ಸ್ಥಾಯಿ ಸಮಿತಿ ಅಧ್ಯಕ್ಷ ಚೇತನ ಪಾಟೀಲ್, ಮುಖ್ಯಾಧಿಕಾರಿ ನರಸರಡ್ಡಿ ಇದ್ದರು.
- ಮಸ್ಕಿ ಪುರಸಭೆ ಅಧ್ಯಕ್ಷ ಸುರೇಶ ಹರಸೂರು ಮಾಹಿತಿ
- ಆಡಳಿತ ಮಂಡಳಿ ಸಭೆ
ಮಸ್ಕಿ: ಪಟ್ಟಣದ ಜನರಿಗೆ ಐದು ದಿನಕೊಮ್ಮೆ ಕುಡಿವ ನೀರು ಪೂರೈಸಲು ಪುರಸಭೆ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಅಧ್ಯಕ್ಷ ಸುರೇಶ ಹರಸೂರು ಹೇಳಿದರು.
ಪುರಸಭೆ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದರು. ಪಟ್ಟಣದ ಕೆರೆಗೆ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರು ಸಂಗ್ರಹಿಸಲಾಗಿದೆ. ನಾಲೆಗೆ ಸೆಪ್ಟೆಂಬರ್ ಅಂತ್ಯದವರೆಗೆ ನೀರು ಹರಿಸುವುದರಿಂದ ಮುಂದಿನ ದಿನಗಳಲ್ಲಿ ಕುಡಿವ ನೀರು ಕೊರತೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ 5 ದಿನಕೊಮ್ಮೆ ನೀರು ಪೂರೈಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಪಟ್ಟಣದ 3 ಮತ್ತು 4ನೇ ವಾರ್ಡ್ ಸರ್ಕಾರಿ ವಸತಿ ಪ್ರದೇಶವನ್ನು ಕೊಳೆಗೇರಿ ಎಂದು ಘೋಷಿಸಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿ, ಜನರಿಗೆ ಹಕ್ಕುಪತ್ರ ವಿತರಿಸಲು ಕ್ರಮವಹಿಸಲಾಗುವುದು. ಪುರಸಭೆ ಸದಸ್ಯರು, ಅಧಿಕಾರಿಗಳು ಮೈಸೂರಿನ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಅಧ್ಯಯ ನಡೆಸಲಾಗುವುದು. ಎಸ್‌ಎಫ್‌ಸಿ ಯೋಜನೆಯಡಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸದ ಕಾರಣ ಆ.8ರವರೆಗೆ ಕೊನೆಯ ದಿನಾಂಕ ವಿಸ್ತರಿಸಲಾಗಿದೆ ಎಂದು ತಿಳಿಸಿದರು.