ರಾಯಚೂರಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅಧ್ಯಕ್ಷತೆಯಲ್ಲಿ ಕುಡಿಯುವ ನೀರಿನ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ತಾಲೂಕು ಪಂಚಾಯತ್ ಆಡಳಿತಾಧಿಕಾರಿ ವನಿತಾ, ತಾಪಂ ಇಓ ಚಂದ್ರಶೇಖರ ಪವಾರ್, ಮಾನ್ವಿ ತಾಪಂ ಇಓ ಖಲೀದ್ ಅಹ್ಮದ್ ಇದ್ದರು. 
ರಾಯಚೂರು

ಕುಡಿಯುವ ನೀರಿನ ಪ್ರಗತಿ ಪರಿಶೀಲನಾ ಸಭೆ -ಕುಡಿಯುವ ನೀರಿಗೆ ಅಧಿಕಾರಿಗಳು ಪ್ರಥಮ ಅದ್ಯತೆ ನೀಡಿ

ರಾಯಚೂರು
ತಾಲೂಕಿನ ಪ್ರತಿ ಗ್ರಾಮ ಆಡಳಿತಾಧಿಕಾರಿಗಳು, ನಿರಂತರವಾಗಿ ಗ್ರಾಮಗಳಲ್ಲಿರುವ ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಕಾರ್ಯ ಪ್ರವೃತ್ತರಾಗಬೇಕು. ಕುಡಿಯುವ ನೀರಿಗೆ ಪ್ರಥಮ ಅದ್ಯತೆ ನೀಡಬೇಕೆಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನ ವ್ಯಾಪ್ತಿಯ ಒಟ್ಟು 35 ಗ್ರಾಮ ಪಂಚಾಯತ್‌ಗಳಲ್ಲಿ 22 ಗ್ರಾಮ ಪಂಚಾಯತ್ ವ್ಯಾಪ್ತಿಯ 62 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾಗಿದ್ದು, ಈ ಬಗ್ಗೆ ಆಯಾ ಗ್ರಾಮ ಪಂಚಾಯತ್ ಅಧಿಕಾರಿಗಳು, ಆಡಳಿತಾಧಿಕಾರಿಗಳು ನಿಗಾ ವಹಿಸಬೇಕು ಎಂದರು.

ಕುಡಿಯುವ ನೀರಿನ ಸಮಸ್ಯೆಗಳನ್ನು ಕ್ರೂಡಿಕರಿಸಿ, ಅವುಗಳನ್ನು ಬಗೆಹರಿಸಲು ಬೇಕಾದ ಕಾಮಗಾರಿಗಳು ಮತ್ತು ಅದಕ್ಕೆ ಬೇಕಾದ ಅನುದಾನ ಸೇರಿದಂತೆ ಇತರೆ ಮಾಹಿತಿಗಳನ್ನು ಕ್ರೂಡಿಕರಿಸಿ, ಕ್ರಿಯಾ ಯೋಜನೆಯನ್ನು ರೂಪಿಸಿ ಜಿಲ್ಲಾ ಪಂಚಾಯತ್‌ಗೆ ಪ್ರಸ್ತವಾನೆ ಸಲ್ಲಿಸಬೇಕು.
ಗ್ರಾಮ ಆಡಳಿತಾಧಿಕಾರಿಗಳಾಗಿ ನೇಮಕವಾದ ಅಧಿಕಾರಿಗಳು, ಆಯಾ ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ, ಅಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಪ್ರಥಮಾಧ್ಯತೆಯನ್ನಾಗಿಸಕೊಂಡು, ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಪಂಚಾಯತ್ ಖಾತೆಗಳನ್ನು ಪರಿಶೀಲಿಸಬೇಕು. ಅನುಧಾನ ಲಭ್ಯತೆಯ ಬಗ್ಗೆಯೂ ಮಾಹಿತಿಯನ್ನು ಪಡೆದುಕೊಳ್ಳಬೇಕು. ಆಡಳಿತಾಧಿಕಾರಿಗಳು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಭೆಗಳನ್ನು ನಡೆಸಬೇಕು ಎಂದರು.

ಬೇಸಿಗೆ ಹಿನ್ನಲೆ ಅಂತರ್ಜಲ ಕುಸಿಯುತ್ತಿದ್ದು, ಜಲ ಮೂಲಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ತಾಲೂಕು ವ್ಯಾಪ್ತಿಯಲ್ಲಿನ 12 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ 21 ಗ್ರಾಮಗಳಲ್ಲಿ 25 ಬೋರ್‌ವೆಲ್ ಗಳನ್ನು ಬಾಡಿಗೆ ಪಡೆದುಕೊಳ್ಳಲಾಗಿದೆ. ಪಿಡಿಓಗಳು ಬೋರ್‌ವೆಲ್‌ಗಳ ಅಗತ್ಯವಿದ್ದರೇ ಸಭೆಯಲ್ಲಿ ತಿಳಿಸಬೇಕು. ಅದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಪಂಚಾಯತ್ ವ್ಯಾಪ್ತಿಯ ಶಾಲೆ, ಗ್ರಂಥಾಲಯಗಳಿಗೆ ನೀರನ್ನು ಒದಗಿಸಲು ಯೋಜನೆ ರೂಪಿಸಬೇಕು ಎಂದರು.

ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಮಾಡಲು ಬಿಡದೇ, ಅಡ್ಡಿ ಪಡಿಸುತ್ತಿರುವ ಬಗ್ಗೆ ಮಾಹಿತಿಯಿದ್ದು, ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಪೊಲೀಸ್ ಠಾಣೆಗೆ ಪಂಚಾಯತ್‌ನಿಂದ ಪತ್ರ ಬರೆದು ಭದ್ರತೆಯೊಂದಿಗೆ ಕಾಮಗಾರಿಗಳನ್ನು ಮಾಡಿಸಬೇಕು. ಆಡಳಿತಾಧಿಕಾರಿಗಳು ಸಭೆ ಕರೆದಾಗ ಆಯಾ ಗ್ರಾಮಗಳ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಸಭೆಗೆ ಹಾಜರಾಗಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ನಿಡಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ತಾಲೂಕು ಪಂಚಾಯತ್ ಆಡಳಿತಾಧಿಕಾರಿ ವನಿತಾ, ತಾಪಂ ಇಓ ಚಂದ್ರಶೇಖರ ಪವಾರ್, ಮಾನ್ವಿ ತಾಪಂ ಇಓ ಖಲೀದ್ ಅಹ್ಮದ್ ಸೇರಿದಂತೆ ವಿವಿಧ ಗ್ರಾಮ ಪಂಚಾಯತ ಆಡಳಿತಾಧಿಕಾರಿಗಳು, ಸಿಬ್ಬಂದಿಗಳು ಇದ್ದರು.