ಮಾನ್ವಿಯ ಅಂಬೇಡ್ಕರ್ ವೃತ್ತದ ಬಳಿ ಹೆದ್ದಾರಿಯಲ್ಲಿ ನಿರ್ಮಾಣವಾಗುತ್ತಿರುವ ಚರಂಡಿ ಕಾಮಗಾರಿ ಸ್ಥಳಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ಪರಿಶೀಲಿಸಿದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ತಾಲೂಕು ಅಧ್ಯಕ್ಷ ಈರಣ್ಣ ಮರ್ಲಟ್ಟಿ, ಪ್ರಮುಖರಾದ ನಾಗರಾಜ ಭೋಗಾವತಿ, ಮೌಲಾಸಾಬ್, ಶರಣಪ್ಪ ಮೇದಾ ಇತರರಿದ್ದರು. 
ರಾಯಚೂರು

ರಾಜ್ಯ ಹೆದ್ದಾರಿಯಲ್ಲಿ ಚರಂಡಿ ಕಾಮಗಾರಿ ಅವೈಜ್ಞಾನಿಕ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ರಾಜಾ ವೆಂಟಪ್ಪನಾಯಕ ಆರೋಪ
  • ಮಾನ್ವಿ ಕಾಮಗಾರಿ ಸ್ಥಳಕ್ಕೆ ಭೇಟಿ
ಮಾನ್ವಿ: ಕಲ್ಮಲಾ ಕ್ರಾಸ್‌ನಿಂದ ಸಿಂಧನೂರುವರೆಗೆ ನಿರ್ಮಾಣವಾಗುತ್ತಿರುವ ಚತುಷ್ಪಥ ರಾಜ್ಯ ಹೆದ್ದಾರಿ ಕಾಮಗಾರಿಯಡಿ ಪಟ್ಟಣದಲ್ಲಿ ಕೈಗೊಂಡಿರುವ ಚರಂಡಿ ನಿರ್ಮಾಣ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಕೂಡಲೇ ಸರಿಪಡಿಸಬೇಕು ಎಂದು ಮಾಜಿ ಶಾಸಕ ರಾಜಾ ವೆಂಟಪ್ಪನಾಯಕ ಆಗ್ರಹಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಹೆದ್ದಾರಿಗೆ ನಿರ್ಮಾಣ ಮಾಡುತ್ತಿರುವ ಚರಂಡಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಚರಂಡಿ ನೇರವಾಗಿ ನಿರ್ಮಿಸದೆ ವೃತ್ತಾಕಾರದಲ್ಲಿ ಮಾಡಿದ್ದಾರೆ. ಇದರಿಂದ ರಸ್ತೆ ಅಪಘಾತಗಳ ಸಂಭವಿಸಲಿವೆ. 1700 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಾಮಗಾರಿ ಅವೈಜ್ಞಾನಿಕ ಹಾಗೂ ಕಳಪೆ ಮಟ್ಟದಲ್ಲಿದ್ದು, ಜನರ ಹಿತಾಸಕ್ತಿಯನ್ನು ಕಡೆಗಣಿಸಲಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲಿಸುತ್ತಿಲ್ಲ. ಗುತ್ತಿಗೆದಾರರು ಮನಬಂದಂತೆ ಕಾಮಗಾರಿ ನಡೆಸಿದ್ದಾರೆ. ಸ್ಥಳೀಯ ಶಾಸಕರು ಹಾಗೂ ಮಾಜಿ ಸಚಿವರು ಕೂಡ ಕಾಮಗಾರಿಯ ಗುಣಮಟ್ಟ ಮತ್ತು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆರೋಪಿದರು.
ಡಾ.ಅಂಬೇಡ್ಕರ್‌ವೃತ್ತದಲ್ಲಿ ಪ್ರತಿವರ್ಷ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಸೇರಿದಂತೆ ವಿವಿಧ ಜಯಂತಿಗಳು, ರಾಷ್ಟ್ರೀಯ ಹಬ್ಬಗಳು, ಸಾರ್ವಜನಿಕ ಸಭೆಗಳು, ಪ್ರತಿಭಟನೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಇಂತಹ ಪ್ರಮುಖ ಸ್ಥಳದಲ್ಲಿ ರಸ್ತೆ ಮಧ್ಯದಲ್ಲಿಯೇ ಚರಂಡಿ ನಿರ್ಮಿಸಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ. ಚರಂಡಿಯನ್ನು ತೆರವುಗೊಳಿಸಿ ರಾಜ ಕಾಲುವೆಗೆ ಜೋಡಿಸಿ ರಸ್ತೆ ಅಗಲ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ತಾಲೂಕು ಅಧ್ಯಕ್ಷ ಈರಣ್ಣ ಮರ್ಲಟ್ಟಿ, ಪ್ರಮುಖರಾದ ನಾಗರಾಜ ಭೋಗಾವತಿ, ಮೌಲಾಸಾಬ್, ಶರಣಪ್ಪ ಮೇದಾ, ಹಳ್ಳಪ್ಪ ನಾಯಕ, ವಿಜಯ್ ನಾಯಕ ಕೊಟ್ನೆಕಲ್, ಕೆ.ಸಾಜಿದ್ ಪಾಷಾ, ಯಲ್ಲಪ್ಪ ನಾಯಕ, ಶಿವರಾಮ್ ರೆಡ್ಡಿ ಹೊಸೂರು, ಜಸ್ವಂತ್ ಶೇಟ್, ಉಸ್ಮಾನ್‌ಸಾಬ್, ಎಚ್.ಮೌನೇಶಗೌಡ, ಶರಣಪ್ಪಗೌಡ ಮದ್ಲಾಪುರ, ಬಾಷಾಸಾಬ್ ಇತರರಿದ್ದರು.