ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು 
ರಾಯಚೂರು

ಡಾ.ಬಸವಪ್ರಭು ಬೆಟ್ಟದೂರು ಸಮ್ಮೇಳನಾಧ್ಯಕ್ಷ

ಮಾನ್ವಿ : ನೀರಮಾನ್ವಿಯಲ್ಲಿ ಫೆ.28ರಂದು ನಡೆಯಲಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಶರಣಬಸವ ನೀರಮಾನ್ವಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಆಯ್ಕೆಗೆ ಆಜೀವ ಸದಸ್ಯರ ಸಭೆಯ ಕರೆಯಲಾಗಿತ್ತು. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನ ಕೈಗೊಂಡು ಡಾ.ಬಸವಪ್ರಭು ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. 
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಶಾಸಕ ಹಂಪಯ್ಯನಾಯಕ ಹಾಗೂ ಗೌರವಧ್ಯಕ್ಷರನ್ನಾಗಿ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಅವರನ್ನು ಆಯ್ಕೆ ಮಾಡಲಾಗಿದೆ. ಉದ್ಘಾಟಕರಾಗಿ ಹೆಸರಾಂತ ಹಿರಿಯ ಸಾಹಿತಿ ಸಿದ್ದರಾಮ ಹೊನ್ಕಲ್ ಶಹಾಪುರು ಭಾಗವಹಿಸಲಿದ್ದಾರೆ. ಸಂಸದ ಜಿ.ಕುಮಾರನಾಯಕ ಸ್ವಾಗತ ಸಮಿತಿ ಗೌರವಾಧ್ಯಕ್ಷ, ಶಾಸಕ ಬಸವನಗೌಡ ದದ್ದಲ್ ಕಾರ್ಯಾಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ, ಗಂಗಾಧರ ನಾಯಕ, ರಾಜಾ ವೆಂಕಟಪ್ಪನಾಯಕ ಹಾಗೂ ಪ್ರಧಾನ ಕಾರ್ಯದರ್ಶಿ ಶರಣಬಸವ ನೀರಮಾನ್ವಿ, ಕಾರ್ಯದರ್ಶಿಗಳಾಗಿ ತಹಸೀಲ್ದಾರ್ ಭೀಮರಾಯ ರಾಮಸಮುದ್ರ, ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್, ಕಸಾಪ ಹೋಬಳಿ ಘಟಕ ಅಧ್ಯಕ್ಷ ಹನುಮಂತಪ್ಪ ಕೊಟ್ನೆಕಲ್ ಹಾಗೂ ಕೋಶಾಧ್ಯಕ್ಷರನ್ನಾಗಿ ಎಚ್. ಶರ್ಫುದ್ದೀನ್ ಪೋತ್ನಾಳ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. 
ಸಾಹಿತ್ಯ ಸಮ್ಮೇಳನದಕ್ಕೆ ಸಾಹಿತಿಗಳು, ಪ್ರಗತಿಪರ ಚಿಂತಕರು, ವಿವಿಧ ಪಕ್ಷಗಳ ಮುಖಂಡರು, ಕನ್ನಡಪರ ಸಂಘಟನೆಗಳು, ಕನ್ನಡ ಅಭಿಮಾನಿಗಳು, ಸಾಹಿತ್ಯಾಭಿಮಾನಿಗಳು ಸೇರಿದಂತೆ ಎಲ್ಲರೂ ಆಗಮಿಸಿ ಯಶಸ್ಸುಗೊಳಿಸಬೇಕು ಎಂದು ಕೋರಿದರು. 
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ತಾಯಪ್ಪ ಬಿ.ಹೊಸೂರು, ಸ್ವಾಗತ ಸಮಿತಿ ಕೋಶಾಧ್ಯಕ್ಷ ಎಚ್.ಶರ್ಫುದ್ದೀನ್ ಪೋತ್ನಾಳ, ತಾಲೂಕು ಕಸಾಪ ಕಾರ್ಯದರ್ಶಿಗಳಾದ ಲಕ್ಷ್ಮಣ್ ಜಾನೇಕಲ್, ಜಿ.ಎಸ್.ಬಾಲಾಜಿಸಿಂಗ್, ಹೋಬಳಿ ಘಟಕ ಅಧ್ಯಕ್ಷ ಹನುಮಂತಪ್ಪ ಕೊಟ್ನೆಕಲ್, ಶ್ರೀಕಾಂತ ಪಾಟೀಲ್ ಗೂಳಿ, ರಾಮು ಹೊಳೆಯಪ್ಪನವರ್ ಇತರರಿದ್ದರು.