ರಾಯಚೂರಿನ ರಸ್ತೆ ಬದಿಯ ಮೊಬೈಲ್ ಕ್ಯಾಂಟಿನ್‌ನಲ್ಲಿ ಗೃಹ ಬಳಕೆಯ ಸಿಲಿಂಡರ್ ಬಳಕೆ ಮಾಡುತ್ತಿರುವುದು. 
ರಾಯಚೂರು

ವಾಣಿಜ್ಯಕ್ಕೆ ಗೃಹ ಬಳಕೆ ಸಿಲಿಂಡರ್ !

ರಾಚಯ್ಯ ಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಕ್ರಮ ವಹಿಸದ ಆಹಾರ ಇಲಾಖೆ
  • ವಾಣಿಜ್ಯ ಕ್ಷೇತ್ರಕ್ಕೆ ಉಜ್ವಲಾ
  • ವಾಣಿಜ್ಯೋತರ ಸಿಲಿಂಡರ್ ಬಳಕೆ
ರಾಯಚೂರು ಇರಾನ್- ಇಸ್ರೇಲ್ ಸೇರಿದಂತೆ ಮಧ್ಯಪ್ರಾಚ್ಯದ ರಾಷ್ಟ್ರದಲ್ಲಿ ಯುದ್ಧದ ಸನ್ನಿವೇಶದಿಂದ ವಾಣಿಜ್ಯ ಅಡಿಗೆ ಅನಿಲದ ಸಿಲಿಂಡರ್ ಪೂರೈಕೆಯನ್ನು ವ್ಯತ್ಯಯವಾಗಿದೆ. ಇದರಿಂದ ಹೋಟೆಲ್‌ಗಳಿಗೆ ಪೂರೈಕೆ ಆಗುತ್ತಿದ್ದ ವಾಣಿಜ್ಯ ಬಳಕೆ ಸಿಲಿಂಡ್ ಸಂಪೂರ್ಣವಾಗಿ ನಿಲ್ಲಿಸಲಾಗಿದ್ದರಿಂದ ಬಳಕೆದಾರರು ಅಡ್ಡ ದಾರಿ ಹಿಡಿಯುವಂತೆ ಮಾಡಿದೆ. ಗೃಹ ಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ವಹಿವಾಟಿಗೆ ಬಳಕೆ ಮಾಡುವ ಅಕ್ರಮ ಆರಂಭಗೊಂಡಿದೆ.
ಕಳೆದ 10 ದಿನಗಳಿಂದ ಜಿಲ್ಲೆಯಲ್ಲಿ ಗ್ಯಾಸ್ ಸಿಲಿಂಡರ್‌ಗಾಗಿ ಜನರು ಪರದಾಟ ನಡೆಸುವುದು ಒಂದು ಕಡೆಯಾದರೆ , ಅನೇಕ ಹೋಟೆಲ್ ಮಾಲೀಕರು ವಾಣಿಜ್ಯ ಸಿಲಿಂಡರ್ ಇಲ್ಲದೆ ಅನೇಕ ತಿಂಡಿ ತಿನಿಸುಗಳನ್ನು ತಯಾಸುವಲ್ಲಿ ಕಡಿಮೆ ಮಾಡಿದ್ದು, ಜತೆಗೆ ಅನೇಕರು ಎಲ್ಲ ಕಡೆ ಗೃಹ ಬಳಕೆಗೆ ಒದಗಿಸುವ ಉಜ್ವಲಾ ಮತ್ತು ಸಾಮಾನ್ಯ ಅಡುಗೆ ಅನಿಲ ಸಿಲಿಂಡರ್ ವಾಣಿಜ್ಯ ಕಾರ್ಯಕ್ಕೆ ಬಳಕೆಯಾಗುತ್ತಿತ್ತಿರುವುದರಿಂದ ಮನೆ ಬಳಕೆಗೆ ಕಷ್ಟವಾಗುತ್ತಿದೆ.
ಎಲ್ಲಿ ಬಳಕೆ?
ಜಿಲ್ಲೆಯ ಅನೇಕ ರಸ್ತೆ ಬದಿಯ ಚಹಾ ಅಂಗಡಿಗಳಿಂದ ಹಿಡಿದು ಕೆಲವೊಂದು ದೊಡ್ಡ ಹೋಟೆಲ್‌ಗಳಲ್ಲಿ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬಳಕೆ ಅಬಾಧಿತವಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ದರ ಏರಿಕೆ ಒಂದು ಕಡೆಯಾದರೆ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತ ಮಾಡಿದ್ದರಿಂದ ಈ ಪ್ರಮಾಣ ಇನ್ನೂ ಏರಿಕೆ ಕಂಡಿದೆ. ಸದ್ಯ 19 ಕೆಜಿ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರ 1850 ರೂ. ತಲುಪಿದೆ. ಬ್ಲಾಕ್‌ನಲ್ಲಿ 4 ರಿಂದ 5 ಸಾವಿರ ತಲುಪಿದ್ದರಿಂದ ಗೃಹ ಬಳಕೆಯ ಸಿಲಿಂಡರ್ ದರ 1 ಸಾವಿರ ರೂ. ಆಸುಪಾಸಿನಲ್ಲಿದೆ. ಈ ರೀತಿ ದರದಲ್ಲಿ ಭಾರಿ ವ್ಯತ್ಯಾಸದಿಂದಾಗಿಯೇ ಬಳಕೆದಾರರು ಅಡ್ಡದಾರಿ ಹಿಡಿದಿದ್ದಾರೆಂಬ ಮಾತು ಕೇಳಿಬಂದಿದೆ.
ಜಿಲ್ಲೆಯಲ್ಲಿ ಅಕ್ರಮವಾಗಿ ಸಾಕಷ್ಟು ಕಡೆ ಉಜ್ವಲಾ ಯೋಜನೆಯ ಹಾಗೂ ಗೃಹ ಬಳಕೆಯ ಅನಿಲ ಸಿಲಿಂಡರ್‌ಗಳನ್ನು ಬಳಕೆ ಮಾಡುತ್ತಿದ್ದರೂ ಅಂಥ ಕಡೆ ದಾಳಿ ಮಾಡುವ ಕಾರ್ಯಕ್ಕೆ ಮಾತ್ರ ಸಂಬಂಧಿಸಿದ ಅಧಿಕಾರಿಗಳು ಗಮನಕೊಡುತ್ತಿಲ್ಲ. ಕಳೆದ 10 ದಿನಗಳಲ್ಲಿ ಮೂರು ಪ್ರಕರಣ ಬಿಟ್ಟರೆ ಈ ರೀತಿಯ ವಾಣಿಜ್ಯೋತರ ಸಿಲಿಂಡರ್ ಬಳಕೆಯ ಪ್ರಕರಣ ಪತ್ತೆ ಮಾಡುವ ಗೋ ಜಿಗೆ ಅಧಿಕಾರಿಗಳು ತಲೆ ಹಾಕಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ವಾಣಿಜ್ಯ ಕ್ಷೇತ್ರಕ್ಕೆ ಉಜ್ವಲಾ
ಬಡವರಿಗಾಗಿ ಕೇಂದ್ರ ಸರಕಾರ ಉಜ್ವಲಾ ಯೋಜನೆ ಮುಖಾಂತರ ಗೃಹ ಬಳಕೆಗಾಗಿ ಗ್ಯಾಸ್ ಸಿಲಿಂಡರ್ ನೀಡುತ್ತಿದೆ. ಕೇಂದ್ರ ಸರಕಾರವು ಗ್ರಾಮೀಣ ಭಾಗದ ಮಹಿಳೆಯರು ಕಟ್ಟಿಗೆ ಉಪಯೋಗಿಸದೆ ಹೊಗೆ ಮುಕ್ತ ಪರಿಸರದಲ್ಲಿ ಅಡುಗೆ ಸಿದ್ದಪಡಿಸಲೆಂಬ ಸದುದ್ದೇಶದಿಂದ ಉಜ್ವಲಾ ಯೋಜನೆ ಜಾರಿಗೆ ತಂದಿದೆ. 2017-2018 ರಿಂದ ಉಜ್ವಲಾ ಯೋಜನೆ ಮುಖಾಂತರ ಗೃಹ ಬಳಕೆಗಾಗಿ ಬಡವರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ನೀಡುತ್ತಾ ಬರುತ್ತಿದೆ. ಆದರೆ ಉಜ್ವಲಾ ಹಾಗೂ ಸಾಮಾನ್ಯ ಗೃಹ ಬಳಕೆಗೆ ಪೂರೈಕೆಯಾಗುವ ಅಡುಗೆ ಅನಿಲ ಸಿಲಿಂಡರ್‌ಗಳ ದರ ವಾಣಿಜ್ಯ ಬಳಕೆಯ ಸಿಲಿಂಡರ್‌ಗಿಂತ ಕಡಿಮೆ ಯಿರುವುದರಿಂದ ಹೋಟೆಲ್ ಮತ್ತಿತರೆಡೆ ರಾಜಾ ರೋಷವಾಗಿ ಈ ಅಕ್ರಮ ನಡೆಸಲಾಗುತ್ತಿದೆ.
ಎಷ್ಟು ಏಜೆನ್ಸಿಗಳು
ಜಿಲ್ಲೆಯಲ್ಲಿ ಒಂದು ಖಾಸಗಿ ಕಂಪನಿ ಸೇರಿ ಒಟ್ಟು 24 ಅಡುಗೆ ಅನಿಲ ವಿತರಕ ಏಜೆನ್ಸಿಗಳು ಇದ್ದು, ಈ ಪೈಕಿ 6 ಭಾರತ ಗ್ಯಾಸ್, 7 ಹಿಂದೂಸ್ಥಾನ ಗ್ಯಾಸ್ ಮತ್ತು 10 ಇಂಡಿಯನ್ ಗ್ಯಾಸ್ ಏಜೆನ್ಸಿಗಳು ಪ್ರಸ್ತುತ ಕಾರ್ಯ ನಿರ್ವಹಣೆ ಮಾಡುತ್ತಿದ್ದರು ಜನರು ಮಾತ್ರ ಗ್ಯಾಸ್ ಸಿಲಿಂಡರ್‌ಗಾಗಿ ಪರದಾಡುವ ಸ್ಥಿತಿ ಮಾತ್ರ ಕಡಿಮೆಯಾಗಿಲ್ಲ.
ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯಕ್ಕೆ ಬಳಕೆ ಮಾಡಿದರೆ ಸೂಕ್ತ ಕ್ರಮ ಜರುಗಿಸಲಾಗುತ್ತಿದೆ. ಕಳೆದ ವಾರದಲ್ಲಿ ಅನೇಕ ದೂರು ದಾಖಲು ಮಾಡಿಕೊಳ್ಳಲಾಗಿದೆ. ಜತೆಗೆ ಸಿಲಿಂಡರ್ ಬಳಕೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ನಜೀರ್ ಅಹ್ಮದ್ ಉಪ ನಿರ್ದೇಶಕ ಆಹಾರ ಇಲಾಖೆ ರಾಯಚೂರು.