ಸಿಂಧನೂರಿನ ಬ್ರಾಹ್ಮಣರ ಓಣಿಯ ಶ್ರೀ ರಾಮಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಧಿಕಮಾಸ ನಿಮಿತ್ತ ಸಾಧಕರಾದ ವೆಂಕಣ್ಣಾಚಾರ್ಯ ಜೋಶಿ ದಂಪತಿಯನ್ನು ಸನ್ಮಾನಿಸಲಾಯಿತು.
ಸಿಂಧನೂರು: ಅಧಿಕಮಾಸ ಪರ್ವಕಾಲವಾಗಿದ್ದು, ಪುರುಷೋತ್ತಮ ಮಾಸವೆಂದೂ ಕರೆಯುತ್ತಾರೆ. ಈ ದಿನಗಳಲ್ಲಿ ಪುಣ್ಯ ಕಾರ್ಯ, ದಾನ-ಧರ್ಮ ಮಾಡಿದರೆ ಅಧಿಕ ಫಲ ದೊರೆಯಲಿದೆ ಎಂದು ಪಂಡಿತ್ ರಾಮಕೃಷ್ಣ ಆಚಾರ್ಯ ಗೋನ್ವಾರ ಹೇಳಿದರು.
ನಗರದ ಬ್ರಾಹ್ಮಣರ ಓಣಿಯ ಶ್ರೀರಾಮಮಂದಿರದಲ್ಲಿ ಭಾನುವಾರ ಚನ್ನಳ್ಳಿ ಪರಿವಾರ ವತಿಯಿಂದ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಜನಾ ಮಂಡಳಿಗಳು ಈ ಮಾಸದಲ್ಲಿ ಶ್ರದ್ಧೆ-ಭಕ್ತಿಯಿಂದ ಭಜನೆ ಮಾಡಿದರೆ ಭಗವಂತ ಅಧಿಕ ಫಲ ನೀಡುತ್ತಾನೆ. ಎಲ್ಲರೂ ಈ ಮಾಸದಲ್ಲಿ ಬಡವರಿಗೆ ದಾನ, ಧರ್ಮಗಳನ್ನು ಮಾಡಬೇಕು ಎಂದು ತಿಳಿಸಿದರು.
ಪ್ರಮುಖರಾದ ಎಂ.ಕೆ.ಗೌರ್ಕರ್, ವೆಂಕಣ್ಣ ಆಚಾರ್ಯ ದೋಟಿಹಾಳ, ಪ್ರಹ್ಲಾದ ಗುಡಿ ವಕೀಲ, ಭೀಮಸೇನ್ ಆಚಾರ್ ನವಲಿ ಮಾತನಾಡಿದರು. ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷ ಗೋವಿಂದರಾವ್ ಕುಲಕರ್ಣಿ ಅಧ್ಯಕ್ಷತೆವಹಿಸಿದ್ದರು. ನಿವೃತ್ತ ಶಿಕ್ಷಕ ಕೃಷ್ಣಾಚಾರ ಬಳಗಾನೂರು, ಮಠಾಧಿಕಾರಿ ನರಸಿಂಹ ಆಚಾರ್ಯ ಪುರೋಹಿತ, ವೆಂಕಟರಾವ ಚನ್ನಳ್ಳಿ, ನಾಗೇಂದ್ರ ಕುಮಾರ್ ಸಾಹುಕಾರ, ನಾಗರಾಜ್ ರಾವ್ ಚನ್ನಳ್ಳಿ, ಗೋಪಾಲರಾವ್ ಕುಲಕರ್ಣಿ, ಗುರುರಾಜ್ ರಾವ್ ಆಲ್ದಾಳ, ರಾಘವೇಂದ್ರರಾವ್ ಕುಲಕರ್ಣಿ, ಹನುಮಂತ ಆಚಾರ್ ಮಸ್ಕಿ ,ಲಕ್ಷ್ಮಣರಾವ್ ಕುಲಕರ್ಣಿ ಇದ್ದರು.
ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಕಾರ್ಯಕ್ರಮದ ಸಂಘಟಕ ರಾಘವೇಂದ್ರರಾವ್ ಚನ್ನಳ್ಳಿ ದಂಪತಿಯನ್ನು ಬ್ರಾಹ್ಮಣ ಸಮಾಜದಿಂದ ಸನ್ಮಾನಿಸಲಾಯಿತು. ಸಂಜೆ ಕರಣಂ ಸಂತೋಷ್ ತಂಡದವರಿಂದ ದಾಸವಾಣಿ ಸಂಗೀತ ಕಾರ್ಯಕ್ರಮ ನಡೆಯಿತು. ಪ್ರಭಾಕರ ಕುಲಕರ್ಣಿ ಹಾಗೂ ಗೀತಾ ಚನ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು.