ಕೇಂದ್ರ ಕಾರ್ಮಿಕ ಸಂಘಟ ನೆಗಳು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಕರೆಯನ್ನು ಬೆಂಬಲಿಸಿ ಅಖಿಲ ಭಾರತ ಕಾರ್ಮಿಕ ರೈತ ಹೋರಾಟ ಸಂಘಟನೆಗಳ ಕಾರ್ಯಕರ್ತರು ಸೋಮವಾರ ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು. ಟಿಯುಸಿಐ ಜಿಲ್ಲಾಧ್ಯಕ್ಷ ಅಡವಿರಾಜ್, ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಹನುಮಂತಪ್ಪ ಮನ್ನಾಪುರಿ, ಪ್ರಮುಖರಾದ ನಿರಂಜನ ಕುಮಾರ,ಎಂ..ಗಾಂಗಧರ,ದೇವಮ್ಮ, ಬಸವರಾಜ,ತಿಪ್ಪರಾಜು, ಆದೇಶ, ಸಿದ್ದಪ್ಪಗೌಡ, ದೇವೆಂದ್ರಪ್ಪ, ನಾಗಮ್ಮ, ಮರಿ ಈಶಪ್ಪ ಇದ್ದರು. 
ರಾಯಚೂರು

ಕಾರ್ಮಿಕರ ಹೋರಾಟಕ್ಕೆ ಜಿಲ್ಲೆಯ ಸಂಘಟನೆಗಳು ಬೆಂಬಲ

ರಾಯಚೂರು

ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಕರೆಯನ್ನು ಬೆಂಬಲಿಸಿ ಅಖಿಲ ಭಾರತ ಕಾರ್ಮಿಕ ರೈತ ಹೋರಾಟ ಸಂಘಟನೆಗಳ ಕಾರ್ಯಕರ್ತರು ಸೋಮವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.

ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಆರಂಭವಾಗಿ, ವಿವಿಧ ರಸ್ತೆಗಳಲ್ಲಿ ಸಂಚರಿಸಿ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಬಹಿರಂಗ ಸಭೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ಪಾಲಿಟ್ ಬ್ಯೂರೊ ಸದಸ್ಯ ಆರ್.ಮಾನಸಯ್ಯ ಮಾತನಾಡಿ, ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರು, ಕಾರ್ಮಿಕರು, ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಎಲ್ಲೆ ಮೀರಿ ಹೋಗಿವೆ. ರಾಮನ ಹೆಸರಿನಲ್ಲಿ ಹುಂಡಿ ಕಳ್ಳತನ ಮಾಡಿ ಜನರ ನಂಬಿಕೆ ದ್ರೋಹ ಎಸಗಿರುವ ನರೇಂದ್ ಮೋದಿ ನೇತೃತ್ವದ ಸರ್ಕಾರ ದುಡಿಯುವ ವರ್ಗದ ಹಕ್ಕುಗಳನ್ನು ಕಸಿದುಕೊಂಡು ಆದಾನಿ, ಅಂಬಾನಿ ಯಂತಹ ಕಾರ್ಪೋರೇಟ ಶಕ್ತಿಗಳಿಗೆ ದೇಶವನ್ನೇ ಮಾರಾಟ ಮಾಡುತ್ತಿದ್ದಾರೆ.

ಬ್ರಿಟಿಟರನ್ನು ದೇಶ ಬಿಟ್ಟು ತೊಲಗಿಸಲು ನಡೆದಿರುವ ಕ್ವಿಟ್ ಇಂಡಿಯಾ ಚಳುವಳಿಗೆ ಭಕ್ತಿಯ ಹೆಸರಿನಲ್ಲಿ ದೇಶ ಮಾರಾಟ ಮಾಡುತ್ತಿರುವವರ ವಿರುದ್ದ ಹೋರಾಟ ಮಾಡಲು ಜನತೆ ಸಿದ್ದವಾಗಬೇಕಾಗಿದೆ. ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ತಂದು ನಾಲ್ಕುಸಸಂಹಿತೆಗಳನ್ನು ಮಾಡುವ ಮೂಲಕ ಕಾರ್ಮಿಕರು ಸಂಘ ಕಟ್ಟಿಕೊಳ್ಳುವ ಸ್ವಾತಂತ್ರ್ಯವೂ ಕಸಿದುಕೊಳ್ಳಲಾಗಿದೆ.

ಕಾರ್ಮಿಕರು ಕನಿಷ್ಟ ವೇತನವೂ ಕೇಳಬಾರದೆಂಬ ಸರ್ಕಾರ ಹೇಳುತ್ತಿವೆ. ಕಾರ್ಮಿಕರು ದುಡಿಯಬೇಕು, ವೇತನ ಕೇಳಬಾರದು ಎಂಬುದು ವಂಚಕ ನೀತಿಯಾಗಿದೆ ಎಂದರು. ಸರ್ಕಾರ ಉದ್ಯೋಗಗಳನ್ನು ನೇಮಕಾತಿ ಮಾಡಿಕೊಳ್ಳದೇ ಹೊರಗುತ್ತಿಗೆ, ಗುತ್ತಿಗೆ, ಅತಿಥಿ, ಹಂಗಾಮಿ ನೌಕರರನ್ನು ನೇಮಿಸಿಕೊಂಡು ಕಾರ್ಮಿಕ ಕಾಯ್ದೆಗಳನ್ನೇ ಧಿಕ್ಕರಿಸಲಾಗುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಎಂಬದು ಅರ್ಥವೇ ಕಳೆದುಕೊಂಡಿದೆ. ಹಕ್ಕುಗಳನ್ನು ಕೇಳಿದರೆ ದೇಶ ವಿರೋಧಿ ಹಣೆಪಟ್ಟಿಕಟ್ಟುವ ಕುತಂತ್ರದ ರಾಜಕಾರಣದ ವಿರುದ್ಧ ಸಂಘಟಿತ ಹೋರಾಟ ನಡೆಸದೇ ಹೋದರೆ ಅಪಾಯ ತಪ್ಪಿಲ್ಲ.

ಕಾರ್ಮಿಕರು, ರೈತರು, ಮಹಿಳೆಯರು, ಜಾತಿ, ಧರ್ಮವನ್ನು ಬಿಟ್ಟು ಕಾರ್ಮಿಕ ಹೋರಾಟ ಆಂದೋಲನವನ್ನಾಗಿ ನಡೆಸಲು ಮುಂದಾಗಬೇಕು ಎಂದರು. ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಿ; ಗುತ್ತಿಗೆ ಹೊರಗುತ್ತಿಗೆ ಪದ್ಧತಿ ನಿಲ್ಲಿಸಿ, ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆ ಮತ್ತು ಕನಿಷ್ಠ 35,000 ರೂ ವೇತನ ಖಾತರಿಪಡಿಸಬೇಕು ಎಂದರು.

ರೈತರ ಕೃಷಿ ಸಾಲ ಮನ್ನಾ ಮಾಡಿ, ಬೆಳೆಗಳಿಗೆ ನ್ಯಾಯಯುತ ಬೆಲೆ ಖಾತರಿಪಡಿಸಬೇಕು. ವಿ.ಬಿ.ರಾಮ್‌ಜಿ ಕಾಯ್ದೆ ರದ್ದುಪಡಿಸಿ, ಹಿಂದಿನ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಮುಂದುವರಿಸಿ, ಗುಳೆ ಹೋಗುವ ಗ್ರಾಮೀಣ ಬಡವರಿಗೆ ವರ್ಷಕ್ಕೆ 250 ದಿನಗಳ ಉದ್ಯೋಗ ಖಾತರಿಪಡಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.