ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಎಐಡಿಎಸ್‌ಒ ಸಂಘಟನೆ ವತಿಯಿಂದ ಸರ್ಕಾರಿ ಶಾಲೆಯ ಉಳಿವಿಗಾಗಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ದಲಿತ ಸಂಘದ ಜಿಲ್ಲಾ ಸಂಚಾಲಕ ಎಂ.ಆರ್.ಭೇರಿ ಮಾತನಾಡಿದರು. ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ಪ್ರಮುಖರಾದ ಎನ್.ಎಸ್.ವೀರೇಶ, ಚೆನ್ನಬಸವ ಜಾನೇಕಲ್, ಮಹೇಶ ಚೀಕಲಪರ್ವಿ, ಹಯ್ಯಳಪ್ಪ, ಕಲ್ಯಾಣ ಇದ್ದರು.
ರಾಯಚೂರು
ಸಂವಿಧಾನದ ಆಶಯದಂತೆ ಉಚಿತ ಕಡ್ಡಾಯ, ಶಿಕ್ಷಣ ನೀಡುವುದು, ಜನರು ವಾಸಿಸುವ ಪ್ರದೇಶದಲ್ಲಿಯೇ ಶಾಲೆಗಳನ್ನು ಆರಂಭಿಸಿ ಶಿಕ್ಷಣ ನೀಡುವುದಾಗಿದೆ. ಹೆಣ್ಣು ಮಕ್ಕಳಿಗೆ ಸಮಾನ ಶಿಕ್ಷಣ ನೀಡಲಿಕ್ಕೆ ಕ್ಯಾಂಪ್‌ಗಳು ಮತ್ತು ತಾಂಡಗಳು ಸೇರಿದಂತೆ ಸಣ್ಣಪುಟ್ಟ ಪ್ರದೇಶದಲ್ಲಿ ಶಾಲೆ ತೆಗೆದು ಶಿಕ್ಷಣ ನೀಡುವುದಾಗಿದೆಂದು ದಲಿತ ಸಂಘದ ಜಿಲ್ಲಾ ಸಂಚಾಲಕ ಎಂ.ಆರ್.ಭೇರಿ ಅಭಿಪ್ರಾಯ ವ್ಯಕ್ತ ಪಡಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಎಐಡಿಎಸ್‌ಒ ಸಂಘಟನೆ ವತಿಯಿಂದ ಸರ್ಕಾರಿ ಶಾಲೆಯ ಉಳಿವಿಗಾಗಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಮಾತನಾಡಿದರು. ದೇಶ ಕಟ್ಟುವ ಕೆಲಸವೆಂದರೆ ಗುಡಿ ಗುಂಡಾರ ಕಟ್ಟುವುದು, ರಸ್ತೆ ಅಭಿವೃದ್ಧಿ ಮಾಡುವುದಲ್ಲ, ಮಕ್ಕಳ ಮನಸ್ಸನ್ನು ಗೆಲ್ಲುವುದು, ಅದು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಸಾದ್ಯವೆಂದರು. ಶಾಲೆಗಳನ್ನು ಮುಚ್ಚುವುದೆಂದರೆ ಬಡ ಜನರಿಗೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದಾಗಿದೆ. ಉಳ್ಳವರಿಗೆ ಶಿಕ್ಷಣ ದೊರೆಯಬೇಕು ಎನ್ನುವ ಉದ್ದೇಶದಿಂದ ಸಣ್ಣಪುಟ್ಟ ಸರ್ಕಾರಿ ಶಾಲೆಗಳನ್ನು ಬಂದ್ ಮಾಡಲು ಹೊರಟಿರುವುದಕ್ಕೆ ಕಿಡಿಕಾರಿದರು.
ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, ಈ ಹಿಂದೆ ಬಿಜೆಪಿ ಸರ್ಕಾರ ಸರ್ಕಾರಿ ಶಾಲೆಗಳ ವಿಲೀನಕ್ಕೆ ಮುಂದಾಗಿತ್ತು, ಇದಕ್ಕೂ ಈಗಿನ ಕಾಂಗ್ರೆಸ್ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೂ ವ್ಯತ್ಯಾಸವಿಲ್ಲ, ಸರ್ಕಾರಿ ಶಾಲೆಗಳನ್ನು ಮುಚ್ಚುವ ದಾರಿ ಒಂದೆ ಹೆಸರುಗಳು ಬೇರೆಬೇರೆಯಾಗಿದೆ. 500 ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಆರಂಭಿಸಲು ಘೋಷಣೆ ಮಾಡಿತ್ತು, ಪಬ್ಲಿಕ್ ಶಾಲೆಗಳನ್ನು ಗುರುತಿಸಿ ಮ್ಯಾಗ್ನೆಟ್ ಎಂದು ಹೆಸರು ಇಟ್ಟು, ಆ ಶಾಲೆಗೆ ಸುತ್ತಮುತ್ತಲಿನ ಶಾಲೆಗಳನ್ನು ಸೇರಿಸಲು ಹೊರಟಿದ್ದು ಮುಚ್ಚುವುದಲ್ಲದೆ ಇನ್ನಾವುದು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎನ್.ಎಸ್.ವೀರೇಶ, ಚೆನ್ನಬಸವ ಜಾನೇಕಲ್, ಮಹೇಶ ಚೀಕಲಪರ್ವಿ, ಹಯ್ಯಳಪ್ಪ, ಕಲ್ಯಾಣ, ಬೂದೆಪ್ಪ, ತಿಮ್ಮಪ್ಪ, ವಿರೇಶ, ಮಂಜುನಾಥ, ಜಗದೀಶ್, ರಫಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.