ರಾಯಚೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜ್ಞಾನ ಭಾರತ ಮಿಷನ್ ಯೋಜನೆಯಡಿ ರಾಷ್ಟ್ರೀಯ ಹಸ್ತ ಪ್ರತಿ ಸಮೀಕ್ಷಾ ಕಾರ್ಯಕ್ಕೆ ಜಿಲ್ಲಾಧಿಕಾರಿ ಪೂವಿತಾ ಎಸ್.ಪೋಸ್ಟರ್ ಬಿಡುಗಡೆ ಮಾಡಿದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ನಜೀರ್ ಅಹ್ಮದ್, ಅಪರ ಜಿಲ್ಲಾಧಿಕಾರಿ ಶಿವಾನಂದ, ಜಿಲ್ಲಾ ಪುರಾತತ್ವ ಸಂರಕ್ಷಣಾಧಿಕಾರಿ ಶಿವಬಸವ, ಆಹಾರ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ಜಿ.ಹರೀಶ, ಪ್ರವಾಸೋದ್ಯಮ ಇಲಾಖೆಯ ಪ್ರಥಮ ದರ್ಜೆ ಸಹಾಯಕಿ ಕವಿತಾ ಇದ್ದರು. 
ರಾಯಚೂರು

ಹಸ್ತ ಪ್ರತಿಗಳ ಸಮೀಕ್ಷಾ ಕಾರ್ಯಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ

ರಾಚಯ್ಯ ಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಪುರಾತನ ಕಾಲದ ಹಸ್ತಪ್ರತಿ, ಶಾಸನಗಳ ಸಂಗ್ರಹ ಇದ್ದಲ್ಲಿ ಮಾಹಿತಿ ನೀಡಿ -ಡಿಸಿ
  • ಜ್ಞಾನ ಭಾರತ ಮಿಷನ್ ಯೋಜನೆಯಡಿ ರಾಷ್ಟ್ರೀಯ ಹಸ್ತ ಪ್ರತಿ ಸಮೀಕ್ಷಾ ಕಾರ್ಯ
ರಾಯಚೂರು
ಜಿಲ್ಲೆಯಾದ್ಯಂತ ಲಭ್ಯವಿರುವ ಶತಮಾನಗಳಷ್ಟು ಹಳೆಯ ಕೈಬರಹದ ಪಠ್ಯಗಳು, ಹಸ್ತಪ್ರತಿಗಳು, ಶಾಸನಗಳು ಹಾಗೂ ದಾಖಲೆಗಳ ಸಂಗ್ರಹವಿದ್ದಲ್ಲಿ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜ್ಞಾನ ಭಾರತ ಮಿಷನ್ ಯೋಜನೆಯಡಿ ರಾಷ್ಟ್ರೀಯ ಹಸ್ತ ಪ್ರತಿ ಸಮೀಕ್ಷಾ ಕಾರ್ಯಕ್ಕೆ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪ್ರಾಚೀನ ಕಾಲದ ಶಾಸನಗಳು, ಹಸ್ತ ಪ್ರತಿಗಳು, ಕೈಬರಹಗಳನ್ನು ತಂತ್ರಜ್ಞಾನ ಮೂಲಕ ಶಾಶ್ವತವಾಗಿ ಉಳಿಸಲು ಅತ್ಯಂತ ಪುರಾತನ, ಹಳೆಯ ದಾಖಲೆಗಳ ಸಮೀಕ್ಷೆ, ಸಂರಕ್ಷಣೆ, ರಕ್ಷಣೆ ಡಿಜಟಲೀಕರಣಗೊಳಿಸಲು ಸರ್ಕಾರವು ಜ್ಞಾನ ಭಾರತಂ ಮಿಷನ್ ಯೋಜನೆ ಜಾರಿಗೆ ತಂದಿದೆ ಎಂದರು.

ರಾಷ್ಟ, ರಾಜ್ಯ, ಕರ್ನಾಟಕದ ಸೀಮಂತ ಸಂಸ್ಕೃತ ಪರಂಪರೆಯನ್ನು ಒಂದೇ ರಾಷ್ಟ್ರೀಯ ವೇದಿಕೆ ಮೂಲಕ ಸಾರ್ವಜನಿಕ ಪ್ರವೇಶವನ್ನು ಒದಗಿಸಿ ಭವಿಷ್ಯದ ಪೀಳಿಗೆಗೆ ಅವುಗಳ ಜ್ಞಾನ ಸಂಪತ್ತಿನ ಸಂರಕ್ಷಣೆ ಮತ್ತು ಬಳಕೆಗೆ ಹಸ್ತ ಪ್ರತಿಗಳ ಸಂರಕ್ಷಣೆ ಹಾಗೂ ಡಿಜಟಲೀಕರಣಗೊಳಿಸಲಾಗುತ್ತಿದೆ. ಜಿಲ್ಲೆಯ ಗ್ರಂಥಾಲಯಗಳು, ದೇವಾಲಯಗಳು, ಮಠಗಳು, ಶೈಕ್ಷಣಿಕ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಪ್ರಾಚೀನ ಸಂಸ್ಥಾನಗಳು, ಪ್ರಾಚೀನ ಮನೆತನಗಳಲ್ಲಿ ಪುರಾತನ ಕಾಲದ ಅಪರೂಪದ ಹಸ್ತ ಪ್ರತಿ, ದಾಖಲೆಗಳ ಸಂಗ್ರಹ ಇರಬಹುದು. ಅವುಗಳ ಬಗ್ಗೆ ಇತಿಹಾಸಕಾರರು, ಸಂಶೋಧಕರು, ಸಾರ್ವಜನಿಕರು ಮಾಹಿತಿ ನೀಡಿ ಸಮೀಕ್ಷಾ ಕಾರ್ಯಕ್ಕೆ ಸಹಕರಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ನಜೀರ್ ಅಹ್ಮದ್, ಅಪರ ಜಿಲ್ಲಾಧಿಕಾರಿ ಶಿವಾನಂದ, ಜಿಲ್ಲಾ ಪುರಾತತ್ವ ಸಂರಕ್ಷಣಾಧಿಕಾರಿ ಶಿವಬಸವ, ಆಹಾರ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ಜಿ.ಹರೀಶ, ಪ್ರವಾಸೋದ್ಯಮ ಇಲಾಖೆಯ ಪ್ರಥಮ ದರ್ಜೆ ಸಹಾಯಕಿ ಕವಿತಾ ಇದ್ದರು.