ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಪರಿಶಿಷ್ಟ ಜಾತಿವರ ಮೇಲೆ ನಡೆದಿರುವ ಅತ್ಯಾಚಾರ, ಕೊಲೆ ಪ್ರಕರಣಗಳ ಭೇದಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು, ಕೂಡಲೇ ಸರ್ಕಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಯನ್ನು ವರ್ಗವಣೆ ಮಾಡಬೇಕೆಂದು ದಲಿತ ಮತ್ತು ಪ್ರಗತಿಪರರ ಸಂಘಟನೆಗಳ ಒಕ್ಕೂಟ ಸಂಚಾಲಕ ಎಸ್.ಮಾರೆಪ್ಪ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಆ.24 ರಂದು ಬೈಕ್ ರ‌್ಯಾಲಿ ನಡೆಸಿ ಜಿಲ್ಲಾಧಿಕಾರಿ ಪೂವಿತಾ ಎಸ್. ಅವರಿಗೆ ಮನವಿ ನೀಡಿದ್ದು ಪರಿಶೀಲಿನಗೆ ಸಿಎಂಗೆ ರವಾನಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳಾಗಿ ತಪ್ಪಿತಸ್ಥರ ಕಠಿಣ ಶಿಕ್ಷೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಭೂಮಾನಂದ ಕೊಲೆ ಪ್ರಕರಣದಲ್ಲಿ 8 ಜನ ಆರೋಪಿಗಳನ್ನು ಬಂಧಿಸಿದ್ದರೂ ಇನ್ನೊಬ್ಬ ಆರೋಪಿ ಭೀಮಾರಾಯ ಹದ್ದಿನಾಳ ಇವರನ್ನು ಬಂಧಿಸಿಲ್ಲ. ತನಿಖಾಧಿಕಾರಿಗಳೇ ಪೂರಕಸಾಕ್ಷಿಗಳಿಲ್ಲ ಎಂದು ಹೇಳುತ್ತಿರುವದು ರಾಜಕೀಯ ಪ್ರಭಾವವೇ ಕಾರಣವಾಗಿದೆ ಎಂದರು.
ಉದ್ದೇಶಪೂರಕವಾಗಿ ಎಫ್‌ಐಆರ್‌ನಲ್ಲಿ 34 ಸೆಕ್ಷನ್ ಸೇರಿಸಿಲ್ಲ. ಜಿಲ್ಲೆಯ ಗುಂಪುಗಾರಿಕೆ ರಾಜಕಾರಣಕ್ಕೆ ದಲಿತದ ಕಗ್ಗೋಲೆಗಳು ಪರಿಹಾರ ಕಾಣದೇ ಹೋಗಿದೆ. ಮೂರು ಪ್ರಕರಣಗಳನ್ನು ಸಿಓಡಿ ತನಿಖೆಗೆ ಹೋರಾಟ ಮುಂದುವರೆಸಲಾಗುತ್ತದೆ ಎಂದರು.
ಹೋರಾಟಗಾರ ರವೀಂದ್ರನಾಥ ಪಟ್ಟಿ ಮಾತನಾಡಿ, ಜಿಲ್ಲೆಯ ದಲಿತರ ಕಗ್ಗೋಲೆ ಘಟನೆಗಳನ್ನು ಸಿಒಡಿ ತನಿಖೆಗೆ ವಹಿಸುವವರೆಗೆ ಹೋರಾಟ ನಡೆಯುತ್ತದೆ. ಗೃಹ ಸಚಿವ ಪ್ರಿಯಾಂಕ ಖರ್ಗೆ ಕಲಬುರಗಿಗೆ ಬರುತ್ತಾರೆ. ರಾಯಚೂರಿಗೆ ಬರಲು ಸಮಯವಿಲ್ಲ. ಉಸ್ತುವಾರಿ ಸಚಿವ ಸಿಎಂ ಭೇಟಿ ಮಾಡುತ್ತಾರೆ. ಕಲಬುರಗಿಯ ತಮ್ಮ ಕ್ಷೇತ್ರದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಲು ಸಮಯವಿದೆ. ಜಿಲ್ಲೆಗೆ ಬರಲು ಸಮಯವಿಲ್ಲ. ಮೂರು ಘಟನೆಗಳಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಗುಂಪುಗಾರಿಕೆ ಮಾಡುತ್ತಿದ್ದಾರೆ. ಸಿಎಂ ಭೇಟಿ ಮಾಡುವಲ್ಲಿಯೂ ಗುಂಪುಗಾರಿಕೆ ನಡೆದಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎಂ.ಆರ್.ಭೇರಿ, ಜೈ ಭೀಮ್, ಹೇಮರಾಜ ಅಸ್ಕಿಹಾಳ, ನರಸಿಂಹಲು ನೆಲಹಾಳ ಇದ್ದರು.