ರಾಯಚೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಜಿಲ್ಲಾಡಳಿತದಿಂದ ಆಯೋಜನೆ ಮಾಡಲಾಗಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮವನ್ನು ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಉದ್ಘಾಟಿಸಿದರು. ಕಲಬುರಗಿ ಜಿಲ್ಲೆಯ ಬಣಮಗಿಯ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಹಿರೆಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಮಂಗಳವಾರಪೇಟೆ ಹಿರೆಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಮಾಜದ ಅಧ್ಯಕ್ಷ ಶರಣಭೂಪಾಲ ನಾಡಗೌಡ, ಮಹಾನಗರ ಪಾಲಿಕೆ ವಲಯ ಆಯುಕ್ತ ಮಲ್ಲಿಕಾರ್ಜುನ, ಜಂಗಮ ಸಮಾಜದ ತಾಲೂಕಾಧ್ಯಕ್ಷ ವೀರಯ್ಯ ಸ್ವಾಮಿ ಇದ್ದರು.
ರಾಯಚೂರು ಸರ್ಕಾರದಿಂದ 30ಕ್ಕೂ ಹೆಚ್ಚು ಜಯಂತಿ ಆಚರಿಸುತ್ತೇವೆ. ಅವುಗಳಲ್ಲಿ ಬಹಳಷ್ಟು ವಿಶೇಷವಾದ ಜಯಂತಿಗಳು ಇರುತ್ತವೆ, ಅಂತಹ ವಿಶಿಷ್ಠವಾದ ಜಯಂತಿಗಳ ಸಾಲಿನಲ್ಲಿ ರೇಣುಕಾಚಾರ್ಯ ಜಯಂತಿಯೂ ಒಂದಾಗಿದೆಂದು ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಲವು ಸಮಾಜದ ಶರಣರು, ದಾರ್ಶನಿಕರು, ಸಂತರು, ಗುರುಗಳು ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದಲು ನೀಡಿದ ಸಂದೇಶಗಳು, ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ಜಯಂತಿಗಳನ್ನು ಆಯಾ ಸಮುದಾಯ, ಸಮಾಜದ ಮಹಾನ ವ್ಯಕ್ತಿಗಳ ತತ್ವಾದರ್ಶಗಳನ್ನು ನೆನೆಯುವ ಉದ್ದೇಶದಿಂದ ಆಚರಣೆ ಮಾಡಲಾಗುತ್ತದೆ. ಇಂದಿನ ಯುವ ಪೀಳಿಗೆಗೆ ಒಳ್ಳೆಯ ಸಂಸ್ಕಾರ, ಉತ್ತಮ ಮೌಲ್ಯಗಳನ್ನು ಕಲಿಯಬೇಕಿದೆ ಜೊತೆಗೆ ಹಾಗೂ ಸಮಾಜ ಅಭಿವೃದ್ಧಿ ಆಗಲು ಶಿಕ್ಷಣ ಬಹುಮುಖ್ಯ ಆದ್ದರಿಂದ ಸಮಾಜದ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಕಲಬುರಗಿ ಜಿಲ್ಲೆಯ ಬಣಮಗಿಯ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪನ್ಯಾಸ ನೀಡಿ, ಜಗತ್ತಿನ ಎಲ್ಲಾ ಧರ್ಮಗಳಿಗಿಂತ ಅದ್ಭುತವಾದ ಧರ್ಮವೆಂದರೆ ಅದು ವೀರಶೈವ ಧರ್ಮವಾಗಿದ್ದು, ಆಶ್ರಯ ದಾತ ಧರ್ಮವಾಗಿದೆ. ಆದರೆ ಪ್ರಸ್ತುತ ಸಮಾಜದ ಮಕ್ಕಳಲ್ಲಿ ಸಂಸ್ಕಾರದ ಕೊರತೆ ಕಾಣುತ್ತಿದೆ. ಮೊದಲು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದು ಹೇಳಿದರು.
ವೀರಶೈವ ಸಮಾಜ ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗದೇ ಇಡೀ ಜಗತ್ತಿಗೆ ಸಂಸ್ಕೃತಿಯನ್ನು ಕಲಿಸುವ ಧರ್ಮವಾಗಿದೆ. ವೀರಶೈವ ಮಠಗಳ ಇತಿಹಾಸ ದೊಡ್ಡದಿದೆ. ಜಗದ್ಗುರು ರೇಣುಕಾಚಾರ್ಯರು 1400 ವರ್ಷಗಳ ವರೆಗೆ ಬದುಕಿದ್ದವರಾಗಿದ್ದರು. ಅಂತಹ ಮಹಾನ್ ವ್ಯಕ್ತಿಗಳು ಸ್ಥಾಪಿಸಿದ ಸಮಾಜ ವೀರಶೈವ ಸಮಾಜವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಹಿರೆಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಮಂಗಳವಾರಪೇಟೆ ಹಿರೆಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಮಾಜದ ಅಧ್ಯಕ್ಷ ಶರಣಭೂಪಾಲ ನಾಡಗೌಡ, ಮಹಾನಗರ ಪಾಲಿಕೆ ವಲಯ ಆಯುಕ್ತ ಮಲ್ಲಿಕಾರ್ಜುನ, ಜಂಗಮ ಸಮಾಜದ ತಾಲೂಕಾಧ್ಯಕ್ಷ ವೀರಯ್ಯ ಸ್ವಾಮಿ ಸೇರಿದಂತೆ ಅನೇಕರಿದ್ದರು.