ರಾಯಚೂರಿನ ಪಂ.ಸಿದ್ದರಾಮಬ ಜಂಬಲದಿನ್ನಿ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಆಯೋಜನೆ ಮಾಡಲಾಗಿದ್ದ ಭಗವಾನ್ ಬದ್ಧರ 2570ನೇ ಜಯಂತಿ ಕಾರ್ಯಕ್ರಮಕ್ಕೆ ಎಸಿ ಡಾ.ಹಂಪಣ್ಣ ಸಜ್ಜನ್ ಚಾಲನೆ ನೀಡಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ ಶರಣಪ್ಪ ಸತ್ಯಂಪೇಟಿ, ಉಪನ್ಯಾಸಕ ಗೌತಮ ಕಟ್ಟಿಮನಿ, ಕೃಷಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಲೇಶ ಕೊಲುಮಿ, ಸಮಾಜದ ಮುಖಂಡರಾದ ಆರ್..ತಿಮ್ಮರೆಡ್ಡಿ, ಶ್ರೀನಿವಾಸ, ನರಸಿಂಹಲು ಇದ್ದರು. 
ರಾಯಚೂರು

ಜಿಲ್ಲಾಡಳಿತದಿಂದ ಭಗವಾನ್ ಬದ್ಧರ 2570ನೇ ಜಯಂತಿ ಆಚರಣೆ

ರಾಯಚೂರು ಭಗವಾನ್ ಬುದ್ಧರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಆದರ್ಶ ಹಾಗೂ ತತ್ವಗಳನ್ನು ನಾವು ಅನುಸರಿಸಬೇಕು, ಅವರ ವಿಚಾರಗಳನ್ನು ನಮ್ಮ ದಿನನಿತ್ಯ ಜೀವನದಲ್ಲಿ ಪಾಲಿಸಬೇಕೆಂದು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಹೇಳಿದರು.
ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಗವಾನ್ ಬದ್ಧರ 2570ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭಗವಾನ್ ಬುದ್ಧರು ಶಾಂತಿ, ಪ್ರೀತಿ ಹಾಗೂ ಸೌಹಾರ್ದತೆಯ ಸಂದೇಶಗಳನ್ನು ನಮ್ಮ ಯುವ ಪೀಳಿಗೆಯವರು ಪಾಲಿಸುವಂತಾಗಬೇಕು. ಬುದ್ಧನ ಪ್ರಮುಖ ಬೋಧನೆಗಳಲ್ಲಿ ಸಕಲ ಜೀವಿಗಳಿಗೂ ಸಹಾನುಭೂತಿ ತೋರಿಸುವದಾಗಿದೆ. ಸಾಮಾನ್ಯ ಜನರ ಜತೆಗೆ ಅವರು ಜೀವನ ನಡೆಸಿದರು ಎಂದರು.
ಭಗವಾನ್ ಬುದ್ಧರು ತಮ್ಮ ತತ್ವ ಮತ್ತು ಸಿದ್ದಾಂತಗಳ ಬಗ್ಗೆ ಜಾಗೃತಿ ಮೂಡಿಸಿದ ಮಹಾನ್ ವ್ಯಕ್ತಿಯಾಗಿದ್ದು, ಅವರ ಜ್ಞಾನಮಾರ್ಗ ಅನುಸರಿಸಿ ನಮ್ಮೊಳಗೆ ಜಾಗೃತಿ ಮೂಡಿಸಿಕೊಂಡು ಸಮಾಜವನ್ನು ಸುಧಾರಣೆ ಮಾಡುವಲ್ಲಿ ನಾವೆಲ್ಲರು ಶ್ರಮಿಸಬೇಕು ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ಮನುಷ್ಯನಿಗೂ ಸಾವಿದೆ ಎಂದು ತಿಳಿದವನ್ನು ಯಾರಿಗೂ ತೊಂದರೆ ಕೊಡುವುದಿಲ್ಲ. ಬೇರೆ ಅವರಿಗೆ ತೊಂದರೆ ಕೊಡದೆ ಕೊಡದಿದ್ದರೆ. ಶಾಂತಿ ತನ್ನಷ್ಟಕ್ಕೆ ತಾನೆ ನೆಲೆಸುತ್ತದೆ. ಎಲ್ಲರೂ ಒಂದಾಗಿ ಹೋಗಬೇಕು. ಜೀವನದಲ್ಲಿ ಶಾಂತಿ ಬೇಕಾದರೆ ಗೌತಮ ಬುದ್ಧರ ಅಷ್ಟಾಂಗ ಮಾರ್ಗವನ್ನು ಅನುಸರಿಸಬೇಕು ಎಂದರು.
ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ ಶರಣಪ್ಪ ಸತ್ಯಂಪೇಟಿ ಮಾತನಾಡಿ, ಜಗತ್ತು ಕಂಡಿರುವ ಚೇತನಗಳಲ್ಲಿ ಗೌತಮ ಬುದ್ಧರು ಒಬ್ಬರು. ಮೂಲತ: ರಾಜ ಮನೆತನದಲ್ಲಿ ಹುಟ್ಟಿದ್ದರು ಅವರು , ತಮ್ಮ 35ನೇ ವರ್ಷದಲ್ಲಿ ವೈರಾಗ್ಯ ಕಡೆಗೆ ಗಮನ ಹರಿಸಿದರು. ಅವರು ತಮ್ಮ ಜ್ಞಾನದ ಮೂಲಕ ಪಂಚ ತತ್ವವನ್ನು ಅನುಸರಿಸಿದರು. ಅಶೋಕ ್ಮಹಾರಾಜರು ಬೌದ್ಧ ಧರ್ಮವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರಕ್ಕೆ ಆದ್ಯತೆ ನೀಡಿದರು. ನಂತರ ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು.
ಈ ವೇಳೆ ಲಕ್ಷಾಂತರ ಜನರು ಈ ಧರ್ಮವನ್ನು ಸೇರಿದರು. ಅವರ ಪಂಚ ತತ್ವ ವಿಚಾರಧಾರೆಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಹೋಗಬೇಕು. ಅವರ ಮಾರ್ಗದರ್ಶನ ಪಾಲಿಸಬೇಕು ಎಂದರು. ಈ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಲೇಶ ಕೊಲುಮಿ, ಸಮಾಜದ ಮುಖಂಡರಾದ ಆರ್..ತಿಮ್ಮರೆಡ್ಡಿ, ಶ್ರೀನಿವಾಸ, ನರಸಿಂಹಲು ಸೇರಿದಂತೆ ಇತರರು ಇದ್ದರು.
ಶಕ್ತಿನಗರದ ಕೆಪಿಸಿಎಲ್ ಪಂ.ಜಾತಿ ಹಾಗೂ ಪಂ.ವರ್ಗದ ನೌಕರರ ಸಂಘದ ಅಧ್ಯಕ್ಷ ಗೌತಮ ಕಟ್ಟಿಮನಿ ಉಪನ್ಯಾಸ ನೀಡಿ, ಮೌಢ್ಯ ನಿರಾಕರಿಸಿ ಸತ್ಯವನ್ನು ಅನುಸರಿಸುವ ಮೂಲಕ ನೇರವಾದ ದೃಷ್ಟಿ ಕೋನ ಬೆಳೆಸಿಕೊಳ್ಳಬೇಕು ಎಂದು ಭೋದಿಸಿದ ಗೌತಮ ಬುದ್ಧರು, ಸಮಾಜದಲ್ಲಿ ಶಾಂತಿ ಸಹಬಾಳ್ವೆಯ ಜೀವನ ನಿರ್ವಹಣೆಯ ತತ್ವವನ್ನು ಜಗತ್ತಿಗೆ ಸಾರಿದರು ಎಂದರು.
ಕಾರ್ಯಕ್ರಮದ ಮೊದಲು ಗೌತಮ ಬುದ್ಧರ 2570ನೇ ಜಯಂತಿ ಅಂಗವಾಗಿ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ ಗೌತಮ ಬುದ್ಧರ ಪ್ರತಿಮೆಗೆ ಜಿಲ್ಲಾಧಿಕಾರಿ ನಿತೀಶ್ ಕೆ., ಜಿಪಂ ಸಿಇಓ ಈಶ್ವರ ಕುಮಾರ ಕಾಂದೂ, ಎಸ್ಪಿ ಅರುಣಾಂಗ್ಶು ಗಿರಿ., ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮಹೋಪಾತ್ರ, ಎಡಿಸಿ ಶಿವಾನಂದ ಅವರು ಸೇರಿದಂತೆ ವಿವಿಧ ಗಣ್ಯರಿಂದ ಗೌರವ ಸಲ್ಲಿಸಲಾಯಿತು. ನಂತರ ಮಹಾತ್ಮಗಾಂಧಿ ಕ್ರೀಡಾಂಗಣ, ಡಾ.ಬಿ.ಆರ್. ಅಂಬೇಡ್ಕರ ವೃತ್ತದ ಮುಖಾಂತರ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದವರಿಗೂ ಭಗವಾನ ಬುದ್ದರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.