ದೇವದುರ್ಗದ ಟಿಎಪಿಸಿಎಂಎಸ್ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದರು. ಉಮಾಪತಿ ಗೌಡ, ಬಸವರಾಜಗೌಡ, ಹನುಮಂತ್ರಾಯ ಕೊತ್ತದೊಡ್ಡಿ, ಸಾಬಣ್ಣ ಉಪ್ಪಾರ, ಬಸಪ್ಪ, ರಾಮಪ್ಪ, ದೇವಪ್ಪ ನಗರಗುಂಡ, ಶಿವರಾಜ, ಬೂದೆಪ್ಪ ಇತರರಿದ್ದರು.
- ವಿವಿಧ ಗ್ರಾಮದ ರೈತರು ಆಕ್ರೋಶ
- ದೇವದುರ್ಗ ಟಿಎಪಿಸಿಎಂಎಸ್ ಮುಂದೆ ಪ್ರತಿಭಟನೆ
ದೇವದುರ್ಗ: ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆದರೂ ಸಕಾಲಕ್ಕೆ ರಸಗೊಬ್ಬರ ವಿತರಿಸದೆ ಅಧಿಕಾರಿಗಳು ನಾನಾ ನೆಪ ಹೇಳುತ್ತಿದ್ದಾರೆಂದು ಆರೋಪಿಸಿ ಟಿಎಪಿಸಿಎಂಎಸ್ ಕಚೇರಿ ಮುಂದೆ ವಿವಿಧ ಗ್ರಾಮದ ರೈತರು ಪ್ರತಿಭಟನೆ ನಡೆಸಿದರು.
ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಉಮಾಪತಿಗೌಡ ಬೆನಕನ್ ಮಾತನಾಡಿ, ತಾಲೂಕಿನ ಬಹುತೇಕ ರೈತರು ಮುಂಗಾರು ಬಿತ್ತನೆ ಮಾಡಿದ್ದಾರೆ. ಆದರೆ, ಸರ್ಕಾರ ಸರಿಯಾಗಿ ರಸಗೊಬ್ಬರ ಪೂರೈಸುತ್ತಿಲ್ಲ. ಯೂರಿಯಾ ಗೊಬ್ಬರದ ಬೇಡಿಕೆಯಿದ್ದು, ಈ ಬಗ್ಗೆ ಸಹಕಾರ ಸಂಘಕ್ಕೆ ಹಲವು ಸಲ ಮನವಿ ಕೊಟ್ಟರೂ ಕೆವೈಸಿ ಮಾಡಿಸಿಲ್ಲ, ದಾಖಲೆ ಇಲ್ಲ ಎನ್ನುವ ಕುಂಟು ನೆಪ ಹೇಳುತ್ತಿದ್ದಾರೆ. ರೈತರು ಮಳೆಯಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಿರುವಾಗ ರಸಗೊಬ್ಬರ ನೀಡಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಇವತ್ತು ಗೊಬ್ಬರ ಪಡೆಯದೆ ಯಾವ ರೈತರು ಮನೆಗೆ ಹೋಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಗಳು ಹಾಗೂ ಸಂಘದ ನಿರ್ದೇಶಕರು ಮಧ್ಯಪ್ರವೇಶಿಸಿ, ನೋಂದಣಿ ಮಾಡಿಕೊಂಡ ರೈತರಿಗೆ ಶೇ.50 ರಸಗೊಬ್ಬರ ವಿತರಣೆ ಮಾಡಿ ವಾತಾವರಣ ತಿಳಿಗೊಳಿಸಿದರು.
ರೈತರಾದ ಬಸವರಾಜಗೌಡ, ಹನುಮಂತ್ರಾಯ ಕೊತ್ತದೊಡ್ಡಿ, ಸಾಬಣ್ಣ ಉಪ್ಪಾರ, ಸಾಬಣ್ಣ, ಬಸಪ್ಪ, ರಾಮಪ್ಪ, ದೇವಪ್ಪ ನಗರಗುಂಡ, ಶಿವರಾಜ, ಬೂದೆಪ್ಪ, ಯಂಕಪ್ಪ, ಕಾಸಿಂಸಾಬ್, ನಾನೇಗೌಡ ಇತರರಿದ್ದರು.