ಗುರುಗುಂಟಾದಲ್ಲಿ ಶ್ರೀ ಅಮರೇಶ್ವರ ಜಾತ್ರೆ ನಿಮಿತ್ತ ಆಯೋಜಿಸಿರುವ ಜಾನುವಾರು ಜಾತ್ರೆಯಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಗುರು ಗಜದಂಡ ಶ್ರೀಗಳು ಉದ್ಘಾಟಿಸಿದರು. ಕೃಷಿ ಮಾರಾಟ ಮಂಡಳಿ ಜಂಟಿ ನಿರ್ದೇಶಕ ರವೀಂದ್ರ ಎಂ., ಗ್ರೇಡ್-2 ತಹಸೀಲ್ದಾರ್ ಬಸವರಾಜ ಝಳಕಿಮಠ, ಎಪಿಎಂಸಿ ಅಧ್ಯಕ್ಷ ಅಮರೇಶ ಹಿರೇಹೆಸರೂರು ಇತರರಿದ್ದರು. 
ರಾಯಚೂರು

ಜಾನುವಾರುಗಳು ಇರುವಲ್ಲಿ ರೋಗಗಳು ದೂರ

ಪ್ರಮುಖ ಮುಖ್ಯಾಂಶಗಳು

  • ಗುರುಗುಂಟಾದಲ್ಲಿ ಗುರು ಗಜದಂಡ ಸ್ವಾಮೀಜಿ ಹೇಳಿಕೆ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ
ಲಿಂಗಸುಗೂರು: ಗುರುಗುಂಟಾ ಶ್ರೀ ಅಮರೇಶ್ವರ ಕ್ಷೇತ್ರದಲ್ಲಿ ಜಾನುವಾರು ಜಾತ್ರೆ ಶತ ಶತಮಾನಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ ಎಂದು ಅಮರೇಶ್ವರ ಗುರು ಗಜದಂಡ ಸ್ವಾಮೀಜಿ ಹೇಳಿದರು. 
ಗುರುಗುಂಟಾ ಶ್ರೀ ಅಮರೇಶ್ವರ ಕ್ಷೇತ್ರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕಲಬುರಗಿ ವಿಭಾಗದ ರಾಜ್ಯ ಕೃಷಿ ಮಾರಾಟ ಮಂಡಳಿ ಹಮ್ಮಿಕೊಂಡಿದ್ದ ಉತ್ತಮ ರಾಸುಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು. ಮಳೆ ಇಲ್ಲದ ಕಾರಣ ನೀರಿನ ಸಮಸ್ಯೆ ಉಂಟಾಗಿ ಸುಮಾರು ವರ್ಷಗಳ ಹಿಂದೆ ಜಾನುವಾರು ಜಾತ್ರೆ ರದ್ದು ಮಾಡಲು ಮುಂದಾಗಿದ್ದರು. 
ಶ್ರೀ ಅಮರೇಶ್ವರನ ಕೃಪೆಯಿಂದ ಜಾತ್ರೆ ಇನ್ನೊಂದು ವಾರ ಇರುವಾಗ ವರ್ಷಧಾರೆಯಾಗಿ ಕೆರೆ ಕಟ್ಟೆಗಳೆಲ್ಲ ತುಂಬಿದ್ದರಿಂದ ಜಾನುವಾರು ಜಾತ್ರೆ ನಡೆಸಲಾಯಿತು. ಜಾನುವಾರು ಜಾತ್ರೆಗೆ ವಿಶೇಷ ಪ್ರಾಧಾನ್ಯತೆ ಕೊಡುತ್ತ ಬರಲಾಗಿದೆ. ಜಾನುವಾರುಗಳು ಎಲ್ಲಿ ಇರುತ್ತವೆ, ಅಲ್ಲಿ ಯಾವುದೇ ರೋಗಗಳು ಇರುವುದಿಲ್ಲ. ಯಾವ ದುಷ್ಟ ಶಕ್ತಿಗಳೂ ನೆಲೆಸುವುದಿಲ್ಲ. ಅಲ್ಲದೆ ಬದುಕಿನ ಸರಳತೆಯನ್ನು ತೋರಿಸಿಕೊಡುತ್ತವೆ ಎಂದರು.
ದೇಶದ ಮಣ್ಣು, ಜಾನುವಾರುಗಳ ಶಕ್ತಿಯಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಉತ್ಪನ್ನವಾಗುತ್ತದೆ. ಇಲ್ಲಿನ ಜಾನುವಾರು ಜಾತ್ರೆಯಲ್ಲಿ ರಾಸುಗಳ ಖರೀದಿ, ಮಾರಾಟದ ಜತೆಗೆ ನೋಡಲು ಸಾವಿರಾರು ಜನ ಬರುತ್ತಾರೆ. ಆದ್ದರಿಂದ ಈ ಜಾತ್ರೆ ಕೃಷಿ ಪ್ರಧಾನವಾದ ಜಾತ್ರೆಯಾಗಿರುತ್ತದೆ ಎಂದು ಗುರುಗಜದಂಡ ಶ್ರೀಗಳು ಹೇಳಿದರು. 
ಕೃಷಿ ಮಾರಾಟ ಮಂಡಳಿಯಿಂದ ಕಸಬಾಲಿಂಗಸುಗೂರಿನ ಈರಪ್ಪ ಬಸ್ಸಪ್ಪ ಅವರ ರಾಸುಗಳಿಗೆ ಪ್ರಥಮ ಬಹುಮಾನ ( 10 ಸಾವಿರ ರೂ.) ನೀಡಿದರೆ, ಗುರುಗುಂಟಾ ಅಮರಪ್ಪ ತಿಪ್ಪಣ್ಣ ಹೊಸಮನಿ ಅವರ ಎತ್ತುಗಳು ದ್ವಿತೀಯ-7500 ರೂ. ಹಾಗೂ ರೋಡಲಬಂಡಾ ಕಾಡಲಿಂಗಪ್ಪ ಶರಣಲಿಂಗಪ್ಪ ಅವರ ರಾಸುಗಳು ತೃತೀಯ-5 ಸಾವಿರ ರೂ. ಹಾಗೂ 10 ಜನರಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು. 
ಕೃಷಿ ಮಾರಾಟ ಮಂಡಳಿ ಜಂಟಿ ನಿರ್ದೇಶಕ ರವೀಂದ್ರ ಎಂ., ಮಹಾದೇವ ಕಲಬುರಗಿ, ಗ್ರೇಡ್-2 ತಹಸೀಲ್ದಾರ್ ಬಸವರಾಜ ಝಳಕಿಮಠ, ಎಪಿಎಂಸಿ ಅಧ್ಯಕ್ಷ ಅಮರೇಶ ಹಿರೇಹೆಸರೂರು, ಕಾರ್ಯದರ್ಶಿ ಟಿ.ನೀಲಪ್ಪ ಶೆಟ್ಟಿ, ಸದಸ್ಯರಾದ ರುದ್ರಗೌಡ ಪಾಟೀಲ್ ಮಾವಿನಭಾವಿ, ಮಲ್ಲಪ್ಪ ಹಂದ್ರಾಳ, ವಿಜಯಲಕ್ಷ್ಮೀ ದೇಸಾಯಿ, ಲಕ್ಷ್ಮವ್ವ, ಹನುಮಪ್ಪ, ಕುಪ್ಪನಗೌಡ, ಮಾಜಿ ಸದಸ್ಯ ಜಡೆಪ್ಪಗೌಡ ಇದ್ದರು.