ಲಿಂಗಸುಗೂರು ಸಮೀಪದ ದೇವರಭೂಪುರ ಬೃಹನ್ಮಠದಲ್ಲಿ ಸೋಮವಾರ ಗುರು ಪಟ್ಟಾಧಿಕಾರ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಕೊಡೇಕಲ್ಲ ಶಿವಕುಮಾರ ಶ್ರೀಗಳು, ಅಭಿನವ ಗುರು ಗಜದಂಡ ಶಿವಾಚಾರ್ಯರು, ಗಂಗಾಧರಯ್ಯ ಶಾಸ್ತ್ರಿ, ಬಸಯ್ಯಸ್ವಾಮಿ ಗೆಜ್ಜಲಗಟ್ಟಾ, ಶರಣಪ್ಪ ನಿಲೋಗಲ್ಲ, ಬಸಯ್ಯ ಜಾಲಿಬೆಂಚಿ, ಅಮರೇಶ ದೇವರಭೂಪುರ ಇತರರಿದ್ದರು.
- ಕೊಡೇಕಲ್ಲ ವಿರಕ್ತಮಠದ ಶಿವಕುಮಾರ ಶ್ರೀಗಳ ಮಾಹಿತಿ
- ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ
ಲಿಂಗಸುಗೂರು: ತಾಲೂಕಿನ ದೇವರಭೂಪುರ ತೋಪಿನಕಟ್ಟೆ ಬೃಹನ್ಮಠದಲ್ಲಿ ಜು. 4ರಿಂದ ಜು.24ರವರೆಗೆ ಅಮರೇಶ್ವರ ಗುರು ಗಜದಂಡ ಶಿವಾಚಾರ್ಯರ 21ನೇ ಪುಣ್ಯ ಸ್ಮರಣೋತ್ಸವ ಹಾಗೂ ಅಭಿನವ ಗಜದಂಡ ಶಿವಾಚಾರ್ಯರ 21ನೇ ಗುರು ಪಟ್ಟಾಧಿಕಾರ ಮಹೋತ್ಸವ ಜರುಗಲಿದೆ ಎಂದು ಕೊಡೇಕಲ್ಲ ಶ್ರೀ ಗುರು ದುರದುಂಡೇಶ್ವರ ವಿರಕ್ತಮಠದ ಶಿವಕುಮಾರ ಶ್ರೀಗಳು ಹೇಳಿದರು.
ದೇವರಭೂಪುರಬೃಹನ್ಮಠದಲ್ಲಿ ಸೋಮವಾರ ಗುರು ಪಟ್ಟಾಧಿಕಾರ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜು. 4ರಂದು ವೇದಾಂತ ಸಮ್ಮೇಳನ ನಡೆಯಲಿದ್ದು, ಮಾಜಿ ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸುವರು. ಶಿವಮೊಗ್ಗ ವೀರಾಪುರ ಚೌಳ ಹಿರಿಯೂರು ಹಿರೇಮಠದ ಡಾ.ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು, ಜಾಲಹಳ್ಳಿ ಬೃಹನ್ಮಠದ ಶಿವಾಭಿನವ ಜಗದಾರಾಧ್ಯ ಜಯ ಶಾಂತಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಶಾಸಕ ಮಾನಪ್ಪ ವಜ್ಜಲ್, ಗುಂತಗೋಳ ಸಂಸ್ಥಾನದ ರಾಜಾ ರಾಯಪ್ಪ ನಾಯಕ, ರಾಜಾ ಅಮರೇಶ್ವರ ನಾಯಕ, ರಾಜಾ ಶ್ರೀನಿವಾಸ ನಾಯಕ, ಗುರುಗುಂಟಾ ಸಂಸ್ಥಾನದ ರಾಜಾ ಸೋಮನಾಥ ನಾಯಕ ಭಾಗವಹಿಸುವರು ಎಂದು ತಿಳಿಸಿದರು.
ಜು. 5ರಂದು ಕೇದಾರ ಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯರ ಪುರ ಪ್ರವೇಶ, 6ರಂದು ರೈತ ಜನಪದೋತ್ಸವ, 7ರಂದು ಪಾರಂಪರಿಕ ವೈದ್ಯರಿಂದ ಆರೋಗ್ಯ ಶಿಬಿರ, 8ರಂದು ಯುವ ಜನೋತ್ಸವ, 9ರಂದು ಸೈನಿಕರು ಮತ್ತು ಸಾಧಕರಿಗೆ ಸನ್ಮಾನ, 10ರಂದು ಮಾತೃ ನಮನ ಕಾರ್ಯಕ್ರಮ, 11ರಂದು ಆರೋಗ್ಯ ತಪಾಸಣೆ ಶಿಬಿರ, 12ರಂದು ನೇತ್ರ ತಪಾಸಣೆ, ಅಭಿನವ ಗಜದಂಡ ಶಿವಾಚಾರ್ಯರ ತುಲಾಭಾರ, 13ರಂದು ವೇದಾಂತ ಸಮ್ಮೇಳನ ಸಮಾರೋಪಗೊಳ್ಳಲಿದೆ. ಜು. 14ರಂದು ಧರ್ಮ ಸಂದೇಶ ಜರುಗಲಿದ್ದು, ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಪುರ ಪ್ರವೇಶ ಮಾಡಲಿದ್ದಾರೆ. ಜು.15 ರಿಂದ 21 ರವರೆಗೆ ಸಿದ್ಧಾಂತ ಶಿಖಾಮಣಿ ಧರ್ಮ ಸಂದೇಶ ಜರುಗಲಿದ್ದು, 22ರಂದು ಪ್ರವಚನ ಸಮಾರೋಪಗೊಳ್ಳಲಿದೆ.
ಜು.23ರಂದು ಜಗದ್ಗುರು ಪಂಚಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ, 24ರಂದು ಲಿಂ.ಶಿವಾಚಾರ್ಯರ ಕ್ರಿಯಾ ಸಮಾಧಿ ಮೇಲೆ ನವಲಿಂಗಗಳ ಪ್ರತಿಷ್ಠಾಪನೆ, ಅಭಿನವ ಗಜದಂಡ ಶಿವಾಚಾರ್ಯರ ಮಂಗಳ ಸ್ನಾನ, ಮಹಾರುದ್ರ ಯಜ್ಞದ ಪೂರ್ಣಹುತಿ ಕಾರ್ಯಕ್ರಮ, ಶ್ರೀಮಠದ ನೂತನ ರಥೋತ್ಸವ ಜರುಗುವುದು ಎಂದು ಶಿವಕುಮಾರ ಶ್ರೀಗಳು ತಿಳಿಸಿದರು.