ಜಾಲಹಳ್ಳಿಯಲ್ಲಿ ಶಾಸಕಿ ಕರೆಮ್ಮ ಜಿ.ನಾಯಕಗೆ ಕರವೇ ಮುಖಂಡರು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ನಂದಪ್ಪ ಪಿ.ಮಡ್ಡಿ, ಪ್ರಧಾನ ಕಾರ್ಯದರ್ಶಿ ಗುರುನಾಥ ರೆಡ್ಡಿ, ಮುಖಂಡರಾದ ಭೀಮಣ್ಣ ನಾಯಕ, ನಂದಪ್ಪ, ಭೀಮನಗೌಡ ಪಾಟೀಲ್ ಇತರರಿದ್ದರು. 
ರಾಯಚೂರು

ಜಾಲಹಳ್ಳಿ-ಲಿಂಗದಹಳ್ಳಿ ರಸ್ತೆ ಅಭಿವೃದ್ಧಿ ಮಾಡಿ

ನರೇಶ್ ಕುಮಾರ್
ದೇವದುರ್ಗ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಾಲಹಳ್ಳಿಯಲ್ಲಿ ಶಾಸಕಿ ಕರೆಮ್ಮ ಜಿ.ನಾಯಕಗೆ ಕರವೇ (ನಾರಾಯಣಗೌಡ ಬಣ) ಮುಖಂಡರು ಶನಿವಾರ ಮನವಿ ಸಲ್ಲಿಸಿದರು.
ಜಾಲಹಳ್ಳಿಯಿಂದ ಲಿಂಗದಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಎಲ್ಲೆಂದರಲ್ಲಿ ತಗ್ಗುದಿನ್ನೆಗಳು ನಿರ್ಮಾಣವಾಗಿವೆ. ಇದರಿಂದ ಜನರ ಓಡಾಟಕ್ಕೆ ತೀವ್ರ ಸಮಸ್ಯೆಯಾಗಿದೆ. ಜಾಲಹಳ್ಳಿಯ ಮುಖ್ಯರಸ್ತೆ ಒತ್ತುವರಿಯಾಗಿದ್ದು, ಟ್ರಾಫಿಕ್ ಜಾಮ್ ಆಗುತ್ತಿದೆ. ಡಿವೈಡರ್, ವಿದ್ಯುತ್ ದೀಪ ಇಲ್ಲದೆ ಜನರಿಗೆ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿದರು. 
ಕೂಡಲೇ ಜಾಲಹಳ್ಳಿ-ಲಿಂಗದಹಳ್ಳಿ ಎಂಟು ಕಿಮೀ ರಸ್ತೆ ಅಭಿವೃದ್ಧಿ ಮಾಡಬೇಕು. ಜಾಲಹಳ್ಳಿ ಮುರಾರ್ಜಿ ಶಾಲೆ 1.25 ಕೋಟಿ ರೂ. ಕಾಮಗಾರಿ ಕಳಪೆಯಾಗಿದ್ದು ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು. ಜಾಲಹಳ್ಳಿಯ ವಾಲ್ಮೀಕಿ ವೃತ್ತದಿಂದ ಬಸವೇಶ್ವರ ಸರ್ಕಲ್‌ವರೆಗೆ ರಸ್ತೆ ಒತ್ತುವರಿ ತೆರವು ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.
ಲಿಂಗಹದಳ್ಳಿ ಶ್ರೀಪರಮಾನಂದ ದೇವಸ್ಥಾನದಲ್ಲಿ ಸಮುದಾಯ ಭವನ ನಿರ್ಮಿಸಬೇಕು. ಬಸವೇಶ್ವರ ವೃತ್ತದಿಂದ ವಾಲ್ಮೀಕಿ ಸರ್ಕಲ್‌ವರೆಗೆ ಡಿವೈಡರ್ ನಿರ್ಮಿಸಿ ಬೀದಿದೀಪ ಅಳವಡಿಸಬೇಕು. ಜಾಲಹಳ್ಳಿಯಲ್ಲಿ ನನೆಗುದಿಗೆ ಬಿದ್ದ ವಾಲ್ಮೀಕಿ ಭವನ ಪೂರ್ಣಗೊಳಿಸಬೇಕು. ತಿಂಥಣಿ ಬ್ರಿಡ್ಜ್‌ನಲ್ಲಿ ಬಸ್ ನಿಲ್ದಾಣ ನಿರ್ಮಿಸಿ ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ನಂದಪ್ಪ ಪಿ.ಮಡ್ಡಿ, ಪ್ರಧಾನ ಕಾರ್ಯದರ್ಶಿ ಗುರುನಾಥ ರೆಡ್ಡಿ, ಮುಖಂಡರಾದ ಭೀಮಣ್ಣ ನಾಯಕ, ನಂದಪ್ಪ, ಭೀಮನಗೌಡ ಪಾಟೀಲ್, ಭೀಮರಾಯ ನಾಯಕ, ತಮ್ಮಣ್ಣ ಹೇರುಂಡಿ, ಮಲ್ಲು ತೆಗ್ಗುಳ್ಳಿ, ಅಮರೇಶ ಪಾಟೀಲ್, ವೆಂಕಟೇಶ, ವೆಂಕಟೇಶ ತುಪ್ಪ, ಸಿದ್ದರಾಮ ಬಿರಾದಾರ್, ರವಿ, ಶೇಖಪ್ಪ ಇತರರಿದ್ದರು.