ದೇವರಭೂಪುರದಲ್ಲ್ಲಿ ಶಾಸಕ ಮಾನಪ್ಪ ವಜ್ಜಲ್, ಕೇಂದ್ರ ಮಾಜಿ ಸಚಿವ ಬಸವರಾಜ ಪಾಟೀಲ್ ಆನ್ವರಿ, ಮಾಜಿ ಸಚಿವ ಅಮರೇಗೌಡ ಬಯ್ಯಪುರ ಅವರನ್ನು ಜಗದ್ಗುರುಗಳು ಸನ್ಮಾನಿಸಿದರು. ಶ್ರೀಮಠದ ಅಭಿನವ ಗಜದಂಡ ಶಿವಾಚಾರ್ಯರು ಇತರರಿದ್ದರು.
- ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಚನ
- ದೇವರಭೂಪುರದಲ್ಲ್ಲಿ ಸದ್ಧರ್ಮ ಸಮಾರಂಭ
ಲಿಂಗಸುಗೂರು: ರಾಷ್ಟ್ರದ ಉಜ್ವಲ ಭವಿಷ್ಯವನ್ನು ನಿರ್ಮಾಣ ಮಾಡುವ ಶಕ್ತಿ ಯುವ ಜನಾಂಗದಲ್ಲಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ದೇವರಭೂಪುರ ಬೃಹನ್ಮಠದ ಅಭಿನವ ಗಜದಂಡ ಶಿವಾಚಾರ್ಯರ ಪಟ್ಟಾಧಿಕಾರದ 21ನೇ ವರ್ಧಂತಿ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಸದ್ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಭಕ್ತಿ ಭಂಡಾರಿ ಬಸವಣ್ಣನವರ ಜೀವನ ಉಜ್ವಲವಾಗಲು ಜಾತವೇದ ಶಿವಾಚಾರ್ಯರು ಹಾಗೂಕಲಬುರಗಿ ಶರಣಬಸಪ್ಪನವರ ಜೀವನ ಬಹಳಷ್ಟು ಎತ್ತರಕ್ಕೆ ಬೆಳೆಯಲು ಮರುಳಸಿದ್ಧರ ಆಶೀರ್ವಾದ ಮೂಲ ಕಾರಣ ಎನ್ನುವುದನ್ನು ಯಾರೂ ಮರೆಯಬಾರದು.
ಮನುಷ್ಯ ಜೀವನದಲ್ಲಿ ಕರ್ತವ್ಯ, ಧರ್ಮಪ್ರಜ್ಞೆ, ಶಿಸ್ತು, ಶ್ರದ್ಧೆ ಮತ್ತು ಸಮರ್ಪಣಾ ಮನೋಭಾವ ಬೆಳೆಸಿಕೊಳ್ಳಬೇಕು. ಅಭಿನವ ಗಜದಂಡ ಶಿವಾಚಾರ್ಯರು ಅಧಿಕಾರದ 21 ವರ್ಷದಲ್ಲಿ ಬಹುದೊಡ್ಡ ಸಾಧನೆ ಮಾಡಿದ ಶ್ರೇಯಸ್ಸು ಅವರದ್ದಾಗಿದೆ ಎಂದರು. ಇದೇ ವೇಳೆ ರಂಭಾಪುರಿ ಪೀಠದಿಂದ ರೇಷ್ಮೆ ಮಡಿ, ಫಲಪುಷ್ಪ, ಸ್ಮರಣಿಕೆ ನೀಡಿ ಶುಭ ಹಾರೈಸಿದರು.
ಕಾಶಿ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು, ಕಾಶಿ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿದರು. ಕೇಂದ್ರ ಮಾಜಿ ಸಚಿವ ಬಸವರಾಜ ಪಾಟೀಲ್ ಆನ್ವರಿ, ಶಾಸಕ ಮಾನಪ್ಪ ವಜ್ಜಲ್, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಮಾತನಾಡಿದರು.
ದೇವರಭೂಪೂರ ಅಭಿನವ ಗಜದಂಡ ಶಿವಾಚಾರ್ಯರ ಮಂಗಳ ಸ್ನಾನ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜರುಗಿತು. ಜಾಲಹಳ್ಳಿ ಜಯಶಾಂತಲಿಂಗ ಶಿವಾಚಾರ್ಯರು, ಮಳಲಿ ಮಠದ ಡಾ.ನಾಗಭೂಷಣ ಶಿವಾಚಾರ್ಯರು, ಗುರುಗುಂಟಾ ಸದಾನಂದ ಶಿವಾಚಾರ್ಯರು, ಗಚ್ಚಿನ ಮಠದ ವರರುದ್ರಮುನಿ ಶಿವಾಚಾರ್ಯರು, ಮಳಲಿ ಮಠದ ಡಾ.ನಾಗಭೂಷಣ ಶಿವಾಚಾರ್ಯರು, ನವಲಕಲ್ಲ ಸೋಮನಾಥ ಶಿವಾಚಾರ್ಯರು, ಬಿಜೆಪಿ ಮುಖಂಡರಾದ ಕೆ.ನಾಗಭೂಷಣ, ಅಯ್ಯಪ್ಪ ಮಾಳೂರು ಇದ್ದರು.