ದೇವದುರ್ಗ ಠಾಣೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಭೇಟಿ ನೀಡಿ ಮಹಿಳಾ ದೌರ್ಜನ್ಯ ಪ್ರಕರಣ ಪರಿಶೀಲಿಸಿದರು. ಪಿಐ ಎಸ್.ಮಂಜುನಾಥ, ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ಶ್ರೀದೇವಿ ರಾಜಶೇಖರ ನಾಯಕ ಇದ್ದರು.
- ಮಹಿಳಾ ಆಯೋಗದ ಅಧ್ಯಕ್ಷ್ಷೆ ಡಾ.ನಾಗಲಕ್ಷ್ಮೀ ಶ್ಲಾಘನೆ
- ಸಂತ್ರಸ್ತ ಬಾಲಕಿ ಶಿಕ್ಷಣಕ್ಕೆ ನೆರವು
ದೇವದುರ್ಗ ಪೊಲೀಸ್ ಠಾಣೆ ಬೆಸ್ಟ್ Devadurga Police Station Best
ದೇವದುರ್ಗ: ಮಹಿಳೆಯರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವುದು, ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಹಾಗೂ ಸಹಾಯವಾಣಿಗೆ ನೀಡುತ್ತಿರುವ ಉತ್ತಮ ಸ್ಪಂದನೆ ಸೇರಿದಂತೆ ವಿವಿಧ ವಲಯಗಳಲ್ಲಿ ಪಿಐ ಎಸ್.ಮಂಜುನಾಥ ಅವರ ತಂಡವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೊಂದು ಬೆಸ್ಟ್ ಪೊಲೀಸ್ ಠಾಣೆಯಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಶ್ಲಾಘಿಸಿದರು.
ಪೋಕ್ಸೋ ಪ್ರಕರಣವೊಂದಕ್ಕೆ ಸಂಬಂಧಿಸಿ ಸೋಮವಾರ ಠಾಣೆಗೆ ಭೇಟಿ ನೀಡಿದ ಅವರು, ಕೆಲ ದಿನಗಳ ಹಿಂದೆ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಗರ್ಭಿಣಿ ಆಗಿರುವ ವಿಷಯದ ಕುರಿತು ಸವಿಸ್ತಾರ ಮಾಹಿತಿ ಪಡೆದರು. ಸಂತ್ರಸ್ತೆ ತಾಯಿಯೊಂದಿಗೆ ಮಾತನಾಡಿದ ಡಾ.ನಾಗಲಕ್ಷ್ಮೀ, ಪೊಲೀಸರು ಸ್ಪಂದಿಸಿದ್ದಾರೆಯೇ? ಆರೋಪಿಗಳ ವಿರುದ್ಧ ಕ್ರಮವಾಗಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತಾಯಿ, ಪೊಲೀಸರ ಕಾರ್ಯದಿಂದ ಧೈರ್ಯ ಬಂದಿದೆ. ನನ್ನ ಮಗಳಿಗೆ ಅನ್ಯಾಯವಾಗಿದ್ದು, ಸಹಾಯ ಮಾಡಿದರೆ ಮುಂದೆ ಓದಿಸುತ್ತೇನೆ ಎಂದರು. ತಕ್ಷಣ ಸ್ಪಂದಿಸಿದ ಅಧ್ಯಕ್ಷರು, ಖಂಡಿತವಾಗಿ ನಿಮ್ಮ ಮಗಳ ಶಿಕ್ಷಣಕ್ಕೆ ಬೇಕಾದ ಎಲ್ಲ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರಕರಣದ ತನಿಖೆಯಲ್ಲಿ ಪಿಐ ಎಸ್.ಮಂಜುನಾಥ ಅವರ ದಕ್ಷತೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮಹಿಳೆಯರ ಮತ್ತು ಮಕ್ಕಳ ಸಹಾಯವಾಣಿಯನ್ನು ದಿನದ 24 ಗಂಟೆಯೂ ಸಕ್ರಿಯವಾಗಿರಿಸಬೇಕು ಮತ್ತು ಯಾವುದೇ ದೂರು ಬಂದರೂ ನಿರ್ಲಕ್ಷೃ ಮಾಡಬಾರದು ಎಂದು ಸೂಚಿಸಿದರು. ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ಪಿಐ ಎಸ್.ಮಂಜುನಾಥ, ಸಿಪಿಐ ಎನ್.ವೈ.ಗುಂಡೂರಾವ್, ಟಿಎಚ್‌ಒ ಡಾ.ಬನದೇಶ್ವರ, ಶಿರಸ್ತೇದಾರ್ ಭೀಮರಾಯ ಮೇಟಿ, ಮುಖಂಡರಾದ ಶ್ರೀದೇವಿ ರಾಜಶೇಖರ ನಾಯಕ ಇತರರಿದ್ದರು.