ರಾಯಚೂರಿನ ಜಿಲ್ಲಾಧಿಕಾರಿಗಳ ಭವನದಲ್ಲಿ ಸೋಮವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಅಂಗವಾಗಿ ಪಲ್ಸ್ ಪೋಲಿಯೋ ಪ್ರಚಾರದ ಪೋಸ್ಟರ್ ಹಾಗೂ ಲಸಿಕಾ ಕೇಂದ್ರದ ಕ್ಯೂ ಆರ್ ಕೋಡ್‌ನ್ನು ಜಿಲ್ಲಾಧಿಕಾರಿ ಪೂವಿತಾ ಎಸ್. ಬಿಡುಗಡೆ ಮಾಡಿದರು. ಜಿಪಂ ಸಿಇಓ ಈಶ್ವರ ಕುಮಾರ ಕಾಂದೊ, ಎಎಸ್ಪಿ ಕುಮಾರಸ್ವಾಮಿ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ತಿಮ್ಮಪ್ಪ ಬಿರಾದರ, ಡಿಎಚ್‌ಓ ಡಾ ಸುರೇಂದ್ರ ಬಾಬು, ಪಲ್ಸ್ ಪೋಲಿಯೊ ಕಾರ್ಯಕ್ರಮದ ಅಧಿಕಾರಿ ಡಾ.ನಂದಿತಾ ಎಂ. ಎನ್., ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕಿ ಶರಣಮ್ಮ, ಕಾರ್ಮಿಕ ಇಲಾಖೆ ಜಿಲ್ಲಾ ಅಧಿಕಾರಿ ಆರತಿ ಇದ್ದರು. 
ರಾಯಚೂರು

ಪಲ್ಸ್ ಪೋಲಿಯೋ ಜವಾಬ್ದಾರಿ ಅಚ್ಚುಕಟ್ಟಾಗಿ ನಿಭಾಯಿಸಿ ಜಿಲ್ಲಾಧಿಕಾರಿ ಪೂವಿತಾ ಎಸ್. ಮಾಹಿತಿ

ರಾಯಚೂರು ಜಿಲ್ಲೆಯಲ್ಲಿ ಜೂ.28 ರಂದು ಜರುಗುವ ಹುಟ್ಟಿನಿಂದ 05 ವರ್ಷದೊಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕಲಾಗುವ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ವಿವಿಧ ಇಲಾಖೆಗಳಿಗೆ ನೀಡಿರುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಅಭಿಯಾನದ ಯಶಸ್ವಿಗೆ ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಭವನದಲ್ಲಿ ಸೋಮವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ 8 ತಾಲೂಕು ಹಾಗೂ ಪಟ್ಟಣಗಳಲ್ಲಿ ವಿವಿಧ ಸ್ಥಳಗಳಲ್ಲಿ ಅನುಷ್ಠಾನ ಮಾಡುವ ಪೋಲಿಯೋ ಬೂತ್‌ಗಳ ಮಾಹಿತಿ ಪಡೆದು, ಈಗಾಗಲೆ ಜಿಲ್ಲೆಯಲ್ಲಿ ಒಟ್ಟು 2,60,002 ಮಕ್ಕಳನ್ನು ಗುರುತಿಸಲಾಗಿದ್ದು, ಮಕ್ಕಳಿಗೆ ಲಸಿಕೆ ನೀಡಲು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 1,132 ಬೂತ್‌ಗಳು ಹಾಗೂ ಸಂತೆ, ಜಾತ್ರೆ, ಮಾರುಕಟ್ಟೆ, ರೈಲು ನಿಲ್ದಾಣ, ಬಸ್ ನಿಲ್ದಾಣ, ಜನ ವಸತಿ ಪ್ರದೇಶ ಸೇರಿದಂತೆ ಮುಂತಾದವುಗಳಲ್ಲಿ ಲಸಿಕೆ ಹಾಕಲು 53 ಟ್ರಾನ್ಸಿಟ್ ಬೂತ್‌ಗಳು ಹಾಗೂ ವಲಸೆ ಪ್ರದೇಶ, ಕಟ್ಟಡ ಕಾಮಗಾರಿ, ಇಟ್ಟಿಗೆ ಬಟ್ಟಿ, ಕಬ್ಬು ಕಡೆಯುವ ಜಾಗೆ, ಕುರಿಹಟ್ಟಿ, ಕೊಳಚೆ ಪ್ರದೇಶ,

ತೋಟದ ಮನೆ, ಮುಂತಾದ ಸ್ಥಳಗಳಲ್ಲಿರುವ ಮಕ್ಕಳಿಗೆ ಲಸಿಕೆ ಹಾಕಲು 33 ಸಂಚಾರಿ ತಂಡ ಹಾಗೂ 248 ಮೇಲ್ವಿಚಾರಕರನ್ನು ನೇಮಿಸಲಾಗಿದ್ದು ನಗರದ ಪ್ರದೇಶದ ಜನತೆಯು ತಮ್ಮ ಮೊಬೈಲ್‌ಗಳ ಸಹಾಯದಿಂದ ಪೂರ್ವದಲ್ಲಿಯೇ ಕ್ಯೂಆರ್ ಕೋಟ್ ಸ್ಕಾೃನ್ ಮಾಡಿ ಮಾಹಿತಿ ಪಡೆಯಲು ಎಲ್ಲ ಗ್ರೂಪ್‌ಗಳಿಗೆ ಶೇರ್ ಮಾಡಲು ತಿಳಿಸಿ ನಿಗದಿತ ಗುರಿ ಸಾಧಿಸಲು ಸೂಚಿಸಿದರು.
ಪಲ್ಸ್ ಪೋಲಿಯೋ ಕಾರ್ಯದಲ್ಲಿ ಸಾಲು ರಜೆಗಳ ಹಿನ್ನಲೆ ಮುಂಚಿತವಾಗಿ ಬೂತ್‌ಗಳನ್ನು ಹೊಂದಿದ ಶಾಲೆ, ಅಂಗನವಾಡಿ ಕೇಂದ್ರಗಳನ್ನು ಸ್ವಚ್ಚಗೊಳಿಸಿ ಅಗತ್ಯ ಕುಡಿಯುವ ನೀರಿನ ವ್ಯವಸ್ಥೆ, ಪಾಲಕರಿಗೆ ಕುಳಿತುಕೊಳ್ಳಲು ಸ್ಥಳಾವಕಾಶ ಕಲ್ಪಿಸಲು ಯಾವುದೆ ನ್ಯೂನ್ಯತೆಯಿಲ್ಲದೆ ಸಿದ್ದಪಡಿಸಲು ಸೂಚಿಸಿದರು.
ಜೂ.23, 24 ಹಾಗೂ 25ರ ಮೂರು ದಿನಗಳ ಕಾಲ ಪ್ರೀ ಆ್ಯಕ್ಟಿವಿಟಿ ಮೂಲಕ ಅಂಗನವಾಡಿ, ಖಾಸಗಿ ಮೊಂಟೇಸ್ಸ್ರಿಗಳಲ್ಲಿ ಎಲ್ಲ 05 ವರ್ಷದ ಮಕ್ಕಳಿಗೆ ಲಸಿಕೆ ಲಸಿಕೆ ಹಾಕಲು ಜಿಲ್ಲಾಧಿಕಾರಿಗಳು ಸಂಬಅಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಪೂರ್ವ ನಿಗದಿಯಂತೆ ಎಲ್ಲ ಆರೋಗ್ಯ ಕೇಂದ್ರಗಳಿಗೆ ಲಸಿಕೆ ಸಂರಕ್ಷಿಸಲು ಸತತವಾಗಿ ವಿದ್ಯುತ್ ಪೊರೈಕೆ, ಲಸಿಕೆ ಸಾಗಿಸಲು ವಾಹನಗಳ ಒದಗಿಸುವಿಕೆ, ತ್ಯಾಜ್ಯ ವಿಲೇವಾರಿ ವಾಹನಗಳ ಮೂಲಕ ಜಿಂಗಲ್ಸ್ ಹಾಕಲು ಎಲ್ಲ ಸ್ಥಳಿಯ ಸಂಸ್ಥೆಯವರಿಗೆ. ಎರಡು ದಿನಗಳ ಕಾಲ ಸ್ಥಳೀಯ ಹಂತದಲ್ಲಿ ಜಾಥಾ ಹಮ್ಮಿಕೊಳ್ಳಲು ಶಿಕ್ಷಣ ಇಲಾಖೆಯವರಿಗೆ ಸೂಚಿಸಿದರು.
ನಂತರ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಅಂಗವಾಗಿ ಪಲ್ಸ್ ಪೋಲಿಯೋ ಪ್ರಚಾರದ ಪೋಸ್ಟರ್ ಹಾಗೂ ಲಸಿಕಾ ಕೇಂದ್ರದ ಕ್ಯೂ ಆರ್ ಕೋಡ್‌ನ್ನು ವಿವಿಧ ಗಣ್ಯರಿಂದ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಪಂ ಸಿಇಓ ಈಶ್ವರ ಕುಮಾರ ಕಾಂದೊ, ಎಎಸ್ಪಿ ಕುಮಾರಸ್ವಾಮಿ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ತಿಮ್ಮಪ್ಪ ಬಿರಾದರ, ಡಿಎಚ್‌ಓ ಡಾ ಸುರೇಂದ್ರ ಬಾಬು, ಪಲ್ಸ್ ಪೋಲಿಯೊ ಕಾರ್ಯಕ್ರಮದ ಅಧಿಕಾರಿ ಡಾ.ನಂದಿತಾ ಎಂ. ಎನ್., ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕಿ ಶರಣಮ್ಮ, ಕಾರ್ಮಿಕ ಇಲಾಖೆ ಜಿಲ್ಲಾ ಅಧಿಕಾರಿ ಆರತಿ ಸೇರಿ ಅನೇಕರು ಇದ್ದರು.