ಗಡಿನಾಡು ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ, ಕಾಲೇಜುಗಳಲ್ಲಿ ಮುಕ್ತ ಪ್ರವೇಶ , ಸಾರಿಗೆ ಬಸ್‌ಪಾಸ್ ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಕೆಗೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಧಿಕಾರಿಗಳ ಭವನದಲ್ಲಿ ಮಂಗಳವಾರ ಗಡಿನಾಡು ಕನ್ನಡ ಸಂಘದ ಪದಾಧಿಕಾರಿಗಳು ಎಡಿಸಿ ಶಿವಾನಂದ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಸಂಘದ ಗೌರವ ಅಧ್ಯಕ್ಷ ರಾಮಲಿಂಗಪ್ಪ ಕುನ್ಸಿ, ಅಧ್ಯಕ್ಷ ನಿಜಾಮುದ್ದಿನ, ರವಿ ಪಾಟೀಲ್ ಇದ್ದರು. 
ರಾಯಚೂರು

ಗಡಿನಾಡು ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಒತ್ತಾಯ

ರಾಚಯ್ಯ ಸ್ವಾಮಿ
ರಾಯಚೂರು ಗಡಿನಾಡು ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ, ಕಾಲೇಜುಗಳಲ್ಲಿ ಮುಕ್ತ ಪ್ರವೇಶ , ಸಾರಿಗೆ ಬಸ್‌ಪಾಸ್ ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಕೆಗೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿಗಳ ಭವನದಲ್ಲಿ ಮಂಗಳವಾರ ಗಡಿನಾಡು ಕನ್ನಡ ಸಂಘದ ಪದಾಧಿಕಾರಿಗಳು ಎಡಿಸಿ ಶಿವಾನಂದ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಜಿಲ್ಲೆಗೆ ಹೊಂದಿಕೊಂಡಿರುವ ತೆಲಂಗಾಣ ರಾಜ್ಯದ ನಾರಾಯಣವೇಟೆ ಜಿಲ್ಲೆಯ ಕೃಷ್ಣಾ ಹಾಗೂ 13 ಗ್ರಾಮಗಳ ಹೊರನಾಡು ಕನ್ನಡಿಗರು ಭಾಷಾವಾರು ಪ್ರಾಂತ ವಿಂಗಡಣೆಯಾದ ಸಂದರ್ಭದಲ್ಲಿ ಭೌಗೋಳಿಕವಾಗಿ ಕನ್ನಡ ರಾಜ್ಯದಿಂದ ಹೊರಗುಳಿದು ಭಾಷೆ, ಸಂಸ್ಕೃತಿಯನ್ನು ಇಂದಿಗೂ ಉಳಿಸಿ ತೆಲಂಗಾಣ, ಆಂಧ್ರ ಸರ್ಕಾರಗಳಿಂದ ನಡೆಸಲ್ಪಡುತ್ತಿರುವ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಅಭ್ಯಾಸ ಮಾಡಿ ಪ್ರೌಢ ಶಿಕ್ಷಣದ ನಂತರ ಕಾಲೇಜು ವ್ಯಾಸಂಗಕ್ಕಾಗಿ ಕರ್ನಾಟಕ ರಾಜ್ಯದಲ್ಲಿರುವ ಕಾಲೇಜುಗಳಿಗೆ ಬಂದರೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಅನಿವಾರ್ಯವಾಗಿ ಅವರು ಶಿಕ್ಷಣವನ್ನು ಅರ್ಧದಲ್ಲಿಯೇ ನಿಲ್ಲಿಸುವಂತಾಗಿದೆ.
ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 1 ರಿಂದ 10ನೇ ತರಗತಿಯವರೆಗೆ ದೇಶದ ಯಾವುದೇ ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಅಭ್ಯಾಸ ಮಾಡಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದ್ದರು. ಆದರೆ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಆದೇಶವು ಇಂದಿಗೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲದಿರುವುದು ವಿಷಾದಕರ. ಕಲ್ಯಾಣ ಕರ್ನಾಟಕದ ಗಡಿಭಾಗದ ಹಾಗೂ ಹೊರರಾಜ್ಯದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಭವಿಷ್ಯ ಆತಂತ್ರವಾಗಿದ್ದು, ಈ ಕುರಿತು ದರಕಗಳಿಂದ ಹೋರಾಟ ಮಾಡುತ್ತಾ ಬರಲಾಗಿದ್ದರೂ ಈ ಭಾಗದ ವಿದ್ಯಾರ್ಥಿಗಳ ಸಮಸ್ಯೆಗಳು ಇತ್ಯರ್ಥವಾಗಿಲ್ಲ ಹೊರ ರಾಜ್ಯದ ಕನ್ನಡಿಗರಿಗೆ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಆಯಾ ರಾಜ್ಯ ಸರ್ಕಾರಗಳು ನೀಡಿದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ಆಧಾರದ ಮೇಲೆ ಪ್ರವೇಶಾವಕಾಶ ಕಲ್ಪಿಸಬೇಕು.
ವಿವಿಧ ವೃತ್ತಿಪರ ಕಾಲೇಜುಗಳಲ್ಲಿ ಹೊರರಾಜ್ಯದ ಕನ್ನಡಿಗರ ಮೀಸಲಾತಿಯ ವಿದ್ಯಾರ್ಥಿಗಳಿಗೆ ಆಯಾ ರಾಜ್ಯ ಸರ್ಕಾರಗಳಿಂದ ಜಾರಿ ಮಾಡಲಾದ ಜಾತಿ, ಆದಾಯ ಪ್ರಮಾಣ ಪತ್ರಗಳನ್ನು ಪರಿಗಣಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲೊಂದಾದ ರಾಯಚೂರು ಜಿಲ್ಲೆಗೆ ಹೊಂದಿಕೊಂಡ ತೆಲಂಗಾಣ ರಾಜ್ಯದ ನಾರಾಯಣಪೇಟೆ ಜಿಲ್ಲೆಯ ಕೃಷ್ಣಾ ಹಾಗೂ ಸುತ್ತಮುತ್ತಲಿನ 13 ಕನ್ನಡ ಗ್ರಾಮಗಳನ್ನು ಕಲಂ 371 (ಜೆ) ಆಡಿಯಲ್ಲಿ ಪರಿಗಣಿಸಬೇಕು. ನವೋದಯ, ಮುರಾರ್ಜಿ ದೇಸಾಯಿ, ಆದರ್ಶ ವಸತಿ ಶಾಲೆಗಳಲ್ಲಿ ಹೊರ ರಾಜ್ಯದ ಕನ್ನಡ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಿ ಪ್ರವೇಶ ಕಲ್ಪಿಸಬೇಕು. ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಪಾಂಕಗಳ ಸೌಲಭ್ಯ ಒದಗಿಸಿ ನೇಮಕಾತಿಗಳಲ್ಲಿ ಶೇ.10 ಮೀಸಲಾತಿ ಒದಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ರಾಮಲಿಂಗಪ್ಪ ಕುನ್ಸಿ, ಅಧ್ಯಕ್ಷ ನಿಜಾಮುದ್ದಿನ, ರವಿ ಪಾಟೀಲ್ ಸೇರಿ ಅನೇಕರು ಇದ್ದರು.