ಆರ್.ಮಾನಸಯ್ಯ 
ರಾಯಚೂರು

ಹೊರಗುತ್ತಿಗೆ ನೌಕರರ ವೇತನ ನೀಡಲು ಒತ್ತಾಯ

ರಾಯಚೂರು
ಆರೋಗ್ಯ ಇಲಾಖೆಯಲ್ಲಿ ಸಿ ಮತ್ತು ಡಿ ಗ್ರೂಪ್ ಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರಿಗೆ 9 ತಿಂಗಳನಿಂದ ವೇತನ ನೀಡದೇ ವಂಚನೆ ಮಾಡಲಾಗುತ್ತಿದೆಂದು ಟಿಯುಸಿಐ ಸಂಯೋಜಿತ ಸಿ ಮತ್ತು ಡಿ ಗ್ರೂಪ್ ವೃಂದದ ಹೊರಗುತ್ತಿಗೆ ನೌಕರರ ಸಂಘ ಗೌರವಾಧ್ಯಕ್ಷ ಆರ್.ಮಾನಸಯ್ಯ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲಾಖೆಯಲ್ಲಿ ವೇತನ ಕೇಳಿದವರನ್ನು ಸೇವೆಯಿಂದ ತೆಗೆದು ಹಾಕುವ ಬೆದರಿಕೆ ಹಾಕಿ ಶೋಷಣೆ ಮಾಡುತ್ತಿದೆ. ವರ್ಷ ಪೂರ್ತಿ ಕೆಲಸಕ್ಕೆ ಹೊರಗುತ್ತಿಗೆ ನೌಕರರನ್ನು ವಿವಿಧ ವಿಭಾಗಗಳಲ್ಲಿ ನೇಮಿಸಿ ಕೊಂಡಿರುವ ಇಲಾಖೆ 2025 ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ನೌಕರರನ್ನು ರಿಲಿವ್ ಮಾಡಿರುವದಾಗಿ ಹೇಳಿ ನಾಲ್ಕು ತಿಂಗಳ ವೇತನ 13 ಕೋಟಿ ರೂ.ಅಧಿಕ ಹಣವನ್ನು ಪಾವತಿಸಿಕೊಂಡಿದೆ. ಜಿಲ್ಲಾ ಆರೋಗ್ಯಾಧಿಕಾರಿ, ಕಚೇರಿ ಅಧೀಕ್ಷಕ ಸೇರಿ ಸಂಬಂಧಿಸಿದ ಎಲ್ಲಾ ನೌಕರರು ಸಹ ನೇರ ಹೊಣೆಗಾರರಾಗಿದ್ದಾರೆ.
ಹೊರಗುತ್ತಿಗೆ ಹುದ್ದೆ ಪಡೆಯಲು ಸಹ ಹಣವಸೂಲಿ ಮಾಡಿರುವ ಏಜೆನ್ಸಿಗಳು ವೇತನ ನೀಡದೇ ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸಿವೆ. 2025 ರಲ್ಲಿ ಮೈಸೂರಿನ ಶಾರ್ಪ್ ವಾಚ್ ಇನ್ವೇಷ್ಟಿಗೇಷನ್ ಸೆಕ್ಯೂರಿಟಿ ಸರ್ವಿಸಸ್ ಹಾಗೂ 2026 ರಲ್ಲಿ ಪಾಪುಲರ್ ಇಂಜಿನಿಯರಿಂಗ್ ಸರ್ವಿಸ್ ಬಳ್ಳಾರಿ ಮೂಲದ ಏಜೆನ್ಸಿಗೆ ಹೊರಗುತ್ತಿಗೆ ನೀಡಲಾಗಿದೆ. ಏಜೆನ್ಸಿಯವರು ಯಾರೆಂದು ಗುತ್ತಿಗೆ ನೌಕರರಿಗೆ ತಿಳಿದಿಲ್ಲ. ಎಲ್ಲವನ್ನು ಆರೋಗ್ಯ ಇಲಾಖೆ ಅಧಿಕಾರಿಗಳೇ ನಿರ್ವಹಿಸುತ್ತಿದ್ದಾರೆ. ಶಾಸಕರು, ಸಚಿವರುಗಳ ಶಿಪಾರಸ್ಸು ಗಳೊಂದಿಗೆ ಕೈ ಲಂಚ ಕೊಟ್ಟು ಹುದ್ದೆ ಪಡೆದಿರುವ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆಯೇ ಇಲ್ಲದೇ ಹೋಗಿದೆಂದು ಆರೋಪಿಸಿದರು.

ಕೂಡಲೇ ಬಾಕಿ ವೇತನ ಶೀಘ್ರದಲ್ಲಿ ಪಾವತಿಯಾಗದೇ ಹೋದಲ್ಲಿ ಹೊರಗುತ್ತಿಗೆ ನೌಕರರು ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಅನಿರ್ದಿಷ್ಟ ಧರಣಿಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷ ಶಂಕ್ರಪ್ಪ ಗುಂಡಸಾಗರ, ಉಪಾಧ್ಯಕ್ಷ ಆಂಜಿನೇಯ, ಪ್ರಮುಖರಾದ ಎಂ.ಗಂಗಾಧರ, ಅಮರೇಶ , ಯಲ್ಲಪ್ಪ, ಜಗದೀಶ ಇದ್ದರು.