ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಕೂಡಲೇ ಅಧಿಸೂಚನೆ ಹೊರಡಿಸಲು ಒತ್ತಾಯಿಸಿ ಶಿಕ್ಷಕ ಆಕಾಂಕ್ಷಿ ಅಭ್ಯರ್ಥಿಗಳು ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ಮಾಡಿ ಗ್ರೇಡ್2 ತಹಸೀಲ್ದಾರ್ ಪರಶುರಾಮ್ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. ಎಐಡಿವೈಓ ಸಂಘಟನೆಯ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ್, ರಾಜ್ಯಸಂಚಾಲಕ ಚನ್ನಬಸವ ಜಾನೇಕಲ್, ಶಿವಪ್ಪ ಅಸ್ಕಿಹಾಳ, ವಿನೋದ್ ಕುಮಾರ, ವೆಂಕಟೇಶ, ಕಾಶಿನಾಥ ಎಂ ಗಿಲೇರಿ, ಭೀಮರೆಡ್ಡಿ ನೆಲಹಾಳ, ಹನುಮಂತ ಕಲ್ಲೂರು, ಬಸವರಾಜ್, ಮಂಜುನಾಥ್, ಶಿವಕುಮಾರ, ಸಂತೋಷ್ ಸಾಗರ್ ಇದ್ದರು. 
ರಾಯಚೂರು

ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಲು ಒತ್ತಾಯ

ರಾಚಯ್ಯ ಸ್ವಾಮಿ
ರಾಯಚೂರು
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಕೂಡಲೇ ಅಧಿಸೂಚನೆ ಹೊರಡಿಸಲು ಒತ್ತಾಯಿಸಿ ಶಿಕ್ಷಕ ಆಕಾಂಕ್ಷಿ ಅಭ್ಯರ್ಥಿಗಳು ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ಮಾಡಿ ಗ್ರೇಡ್2 ತಹಸೀಲ್ದಾರ್ ಪರಶುರಾಮ್ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಎಐಡಿವೈಓ ಸಂಘಟನೆಯ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ್ ಮಾತನಾಡಿ, ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಒಂದು ಲಕ್ಷ ಹುದ್ದೆಗಳ ಭರ್ತಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಒಂದೇ ಒಂದು ಹುದ್ದೆಯನ್ನು ಭರ್ತಿ ಮಾಡಿಲ್ಲ. ಇತ್ತೀಚೆಗೆ ಮುಖ್ಯಮಂತ್ರಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ 15,000 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದಾರೆ. ಎಷ್ಟು ಜನ ಶಿಕ್ಷಣ ಸಚಿವರು ಬರಿ ಸುಳ್ಳುಗಳನ್ನೇ ಹೇಳಿಕೊಂಡು ಬಂದಿದ್ದಾರೆ ಎಂದು ಟೀಕಿಸಿದರು.

ಹೋರಾಟ ಸಮಿತಿಯ ರಾಜ್ಯಸಂಚಾಲಕ ಚನ್ನಬಸವ ಜಾನೇಕಲ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗವು ಇಡೀ ರಾಜ್ಯದಲ್ಲಿಯೇ ಶಿಕ್ಷಕರ ಗಂಭೀರ ಕೊರತೆಯನ್ನು ಎದುರಿಸುತ್ತಿದೆ. ಕಲ್ಯಾಣ ಕರ್ನಾಟಕದ ಶಾಲೆಗಳಲ್ಲಿ ಒಟ್ಟು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸೇರಿದಂತೆ 22,595 ಹುದ್ದೆಗಳು ಖಾಲಿ ಬಿದ್ದಿವೆ. ಅದರಲ್ಲಿ 18,317 ಪ್ರಾಥಮಿಕ ಶಾಲಾ ಶಿಕ್ಷಕರು, 4278 ಪ್ರೌಢಶಾಲಾ ಶಿಕ್ಷಕರ ಅನುಮೋದಿತ ಹುದ್ದೆಗಳು ಖಾಲಿ ಬಿಡಲಾಗಿದೆ. ಈ ವಿಷಯದಲ್ಲಿ ಜಿಲ್ಲೆಯು ಅತ್ಯಂತ ಗರಿಷ್ಠ ಪ್ರಮಾಣದ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿದೆ. ಪ್ರಾಥಮಿಕ ಶಿಕ್ಷಕರ 8,460 ಅನುಮೋದಿತ ಹುದ್ದೆಗಳಲ್ಲಿ ಕೇವಲ 3900 ಶಿಕ್ಷಕರ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 4560 ಹುದ್ದೆಗಳು ಖಾಲಿ ಇವೆ. ಅದೇ ರೀತಿ ಪ್ರೌಢಶಾಲೆಯಲ್ಲಿ 2239 ಹುದ್ದೆಗಳನ್ನು ಅನುಮೋದಿಸಲಾಗಿದೆ. ಅದರಲ್ಲಿ 1175 ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 1064 ಹುದ್ದೆಗಳು ಖಾಲಿಯಾಗಿವೆ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಒಟ್ಟು 5624 ಶಿಕ್ಷಕರು ಇಲ್ಲ. ಶಿಕ್ಷಕರೇ ಇಲ್ಲದ ಶಾಲೆಗಳು ಶೂನ್ಯ ಶಿಕ್ಷಕ ಶಾಲೆಗಳು ಅತ್ಯಂತ ಹೆಚ್ಚು ದೇವದುರ್ಗ ತಾಲೂಕಿನಲ್ಲಿ 105 ಶಾಲೆಗಳಿವೆ. ಅವುಗಳನ್ನು ಅತಿಥಿ ಶಿಕ್ಷಕರ ಮೂಲಕ ನಡೆಸಲಾಗುತ್ತಿದೆ.
ಏಕೋಪಾಧ್ಯಾಯ ಶಾಲೆಗಳು 266 ಇವೆ. ಇದರಿಂದಾಗಿ ಶಿಕ್ಷಕರ ಗಂಭೀರ ಕೊರತೆ ಉಂಟಾಗಿದೆ. ಶಿಕ್ಷಣದ ಗುಣಮಟ್ಟ ಕುಸಿತವಾಗಿದೆ. ಈ ಹಿಂದಿನ ವರ್ಷಗಳಲ್ಲಿ ಫಲಿತಾಂಶಗಳಲ್ಲಿ ಅತ್ಯಂತ ಕಳಪೆ ಸಾಧನೆ ದಾಖಲಾಗಿತ್ತು. ಇಡೀ ರಾಜ್ಯದಲ್ಲಿ ಜಿಲ್ಲೆ ಕೊನೆಯ ಸ್ಥಾನಗಳನ್ನು ಪಡೆಯುತ್ತಿರುವುದಕ್ಕೆ ಕಾರಣವಾಗಿದೆ. ಆದರಿಂದ ಕೂಡಲೇ ಪ್ರಾಥಮಿಕ , ಪದವೀಧರ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಕೂಡಲೇ ಅಧಿಸೂಚನೆ ಹೊರಡಿಸಬೇಕು. ದೈಹಿಕ ಶಿಕ್ಷಣ ಶಿಕ್ಷಕರು, ಚಿತ್ರಕಲಾ, ರಂಗಕಲಾ ಮತ್ತು ಸಂಗೀತ ಶಿಕ್ಷಕರ ನೇಮಕಾತಿಗೆ ಕ್ರಮಕೈಗೊಳ್ಳಬೇಕು. ಶಿಕ್ಷಕರ ಹುದ್ದೆಗಳನ್ನು ನಾಶ ಮಾಡುವ ಕೆಪಿಎಸ್- ಮ್ಯಾಗ್ನೆಟ್ ಯೋಜನೆ ಕೈಬಿಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಶಿವಪ್ಪ ಅಸ್ಕಿಹಾಳ, ವಿನೋದ್ ಕುಮಾರ, ವೆಂಕಟೇಶ, ಕಾಶಿನಾಥ ಎಂ ಗಿಲೇರಿ, ಭೀಮರೆಡ್ಡಿ ನೆಲಹಾಳ, ಹನುಮಂತ ಕಲ್ಲೂರು, ಬಸವರಾಜ್, ಮಂಜುನಾಥ್, ಶಿವಕುಮಾರ, ಸಂತೋಷ್ ಸಾಗರ್ , ಶರಣಬಸವ, ಶಿವಕುಮಾರ, ಅಮೀರ್ , ಸರೋಜಾ ಗೋನವಾರ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಲಕ್ಷ್ಮಣ್ ಸೇರಿ ಅನೇಕರು ಇದ್ದರು.