ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಗ್ರೂಪ್ ಡಿ ನೌಕರರ ಬಾಕಿ ವೇತನವನ್ನು ಪಾವತಿ ಮಾಡುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಶುಕ್ರವಾರ ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರ ಸಂಘದಿಂದ ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಶಂಕ್ರಪ್ಪ ಗುಂಡುಸಾಗರ, ಅಮರೇಶ ಬಡಿಗೇರ್, ಆರ್. ಮಾನಸಯ್ಯ, ಮಲ್ಲಿಕಾರ್ಜುನ, ಜಗದೀಶ , ಟಿಯುಸಿಐ ಅಧ್ಯಕ್ಷ ಅಡವಿರಾವ್, ಗಂಗಾಧರ, ನಿರಂಜನ, ಶರಣಬಸವ ಇದ್ದರು.
ಜಿಲ್ಲೆಯ ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಣೆ ಮಾಡುವ ಗ್ರೂಪ್ ಡಿ ನೌಕರರ ಬಾಕಿ ವೇತನವನ್ನು ಪಾವತಿ ಮಾಡುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಶುಕ್ರವಾರ ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರ ಸಂಘದಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಿದರು.
ವೇತನ ಪಾವತಿ ಕಾಯ್ದೆಯ ಪ್ರಕಾರ ಪ್ರತಿ ತಿಂಗಳ 7ನೇ ದಿನದೊಳಗೆ ಕಾರ್ಮಿಕರಿಗೆ ವೇತನ ಪಾವತಿಸಬೇಕಾಗಿದ್ದರೂ, ಹಲವು ನೌಕರರಿಗೆ ನಿಗದಿತ ಅವಧಿಯಲ್ಲಿ ವೇತನ ಪಾವತಿಯಾ ಗುತ್ತಿಲ್ಲ ಎಂದು ದೂರಿದರು.
ಪ್ರತಿಯಾಗಿ ಇಲಾಖೆಯ ಅಧಿಕಾರಿಗಳು ಶೀಘ್ರವೇ ಬಾಕಿ ವೇತನ ಪಾವತಿಸುವುದಾಗಿ ಭರವಸೆ ನೀಡಿದ್ದರೂ, ಭರವಸೆಯಂತೆ ಎಲ್ಲ ನೌಕರರಿಗೆ ವೇತನ ಪಾವತಿಯಾಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಸಂಬಂಧಿಸಿದ ಏಜೆನ್ಸಿಗೆ ತುರ್ತು ನೋಟಿಸ್ ನೀಡಿ, ಪಟ್ಟಿಯಲ್ಲಿ ನಮೂದಿಸಿರುವ ಎಲ್ಲಾ ಕಾರ್ಮಿಕ ರಿಗೆ ಸಂಪೂರ್ಣ ಬಾಕಿ ವೇತನ ಪಾವತಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಘ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂಎಲ್) ರೆಡ್‌ಸ್ಟಾರ್ ಪಾಲಿಟ್ ಬ್ಯರೋ ಸದಸ್ಯ ಆರ್.ಮಾನಸಯ್ಯ ಮಾತನಾಡಿ, ಹೊರಗುತ್ತಿಗೆ ಪದ್ದತಿಯನ್ನು ರದ್ದುಪಡಿಸುವದಾಗಿ ಹೇಳುವ ಸರ್ಕಾರಗಳು ಮತ್ತೊಂದು ಕಡೆಯಿಂದ ಹೊರಗುತ್ತಿಗ ಪದ್ಧತಿಯನ್ನು ಪೋಷಿಸುತ್ತಿದೆ. ಕಡಿಮೆ ಸಂಬಳ ನೀಡಿ ವೇತನ, ಪಿಎಫ್, ಇಎಸ್‌ಐ ಸೇರಿದಂತೆ ಇತರೆ ಸೌಲಭ್ಯ ನೀಡುತ್ತಿಲ್ಲ. ಆದರೂ ಸರ್ಕಾರಗಳ ಮೌನದ ಹಿಂದೆ ಅಕ್ರಮ ಮಾಫಿಯಾದ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಕಾರ್ಮಿಕ ಕಾಯ್ದೆಗಳು, ಸರ್ಕಾರವೇ ರೂಪಿಸಿದ ನಿಯಮ, ಷರತ್ತುಗಳ ಉಲ್ಲಂಘನೆಯಾದರೂ ಕನಿಷ್ಟ ಸ್ಪಂದನೆಯನ್ನು ಆಡಳಿತ ಕಳೆದುಕೊಂಡಿದೆ. ದುಡಿಯುವರಿಗೆ ವೇತನವಿಲ್ಲ.ಕೂಲಿ ಇಲ್ಲ. ಹೊರಗುತ್ತಿಗೆ ನೌಕರರು ಶೋಷಣೆಗೆ ಗುರಿಯಾಗುತ್ತಿದ್ದು ಕೂಡಲೇ ಜಿಲ್ಲಾಡಳಿತ ಸ್ಪಂದಿಸದೇ ಹೋದರೆ ಹೋರಾಟ ತೀವ್ರಗೊಳ್ಳುತ್ತದೆ ಎಂದು ಎಚ್ಚರಿಸಿದರು.