ರೈತರಿಗೆ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರವನ್ನು ಸಮರ್ಪಕವಾಗಿ ಪೂರೈಕೆಗೆ ಒತ್ತಾಯಿಸಿ ರಾಯಚೂರಿನ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಮಂಗಳವಾರ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿಯಿಂದ ಧರಣಿ ಸತ್ಯಾಗ್ರಹ ನಡೆಸಿದರು. ಕರ್ನಾಟಕ ಕೃಷಿ ಕೂಲಿಕಾರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಚಂದ್ರಪ್ಪ, ಪ್ರಮುಖರಾದ ಬಸವಂತ್ರಾಯಗೌಡ, ನರಸಣ್ಣನಾಯಕ, ಚನ್ನಪ್ಪ ಆನೆಗುಂದಿ, ಕೆ.ಜಿ. ವೀರೇಶ, ಕರಿಯಪ್ಪ , ರಂಗನಗೌಡ, ದೇವೇಂದ್ರ ಗೌಡ, ಹೆಚ್. ಪದ್ಮಾ, ಪೆಂಚಲಯ್ಯ, ರಂಗಪ್ಪ ಯಾಪಲದಿನ್ನಿ ಇದ್ದರು. 
ರಾಯಚೂರು

ಗುಣ್ಣಮಟ್ಟದ ಬೀಜ,ರಸಗೊಬ್ಬರ ವಿತರಣೆಗೆ ಒತ್ತಾಯ

ರಾಯಚೂರು ರೈತರಿಗೆ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರವನ್ನು ಸಮರ್ಪಕವಾಗಿ ಪೂರೈಕೆ, ಬಡ ನಿವೇಶನ ರಹಿತ ಕುಟುಂಬಗಳಿಗೆ ಮನೆ ನಿವೇಶನ ಮತ್ತು ಹಕ್ಕುಪತ್ರಗಳನ್ನು ವಿತರಿಸಬೇಕೆಂದು ಒತ್ತಾಯಿಸಿ ನಗರದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಮಂಗಳವಾರ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿಯಿಂದ ಧರಣಿ ಸತ್ಯಾಗ್ರಹ ನಡೆಸಿದರು.
ಮುಂಗಾರು ಆರಂಭವಾಗಿದ್ದರೂ ಜಿಲ್ಲೆಯ ಹಲವು ಭಾಗಗಳಲ್ಲಿ ರೈತರಿಗೆ ಗುಣಮಟ್ಟದ ಬೀಜ ಮತ್ತು ರಸಗೊಬ್ಬರಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಕೆಲ ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಜಿಲ್ಲಾಡಳಿತ ತಕ್ಷಣ ಮಧ್ಯ ಪ್ರವೇಶಿಸಿ ಎಲ್ಲಾ ತಾಲ್ಲೂಕುಗಳಲ್ಲಿ ರೈತರಿಗೆ ಎಂಆರ್‌ಪಿ ದರದಲ್ಲಿ ಅಗತ್ಯ ಪ್ರಮಾಣದ ಬೀಜ ಮತ್ತು ರಸಗೊಬ್ಬರ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಸರ್ಕಾರ ಎಂಎಸ್ ಪಿ ದರದಲ್ಲಿ ಖರೀದಿಸಿರುವ ಜೋಳದ ಬಾಕಿ ಹಣವನ್ನು ಇನ್ನೂ ಅನೇಕ ರೈತರಿಗೆ ಪಾವತಿಸಿಲ್ಲ. ಬಾಕಿ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ ವಿದ್ಯುತ್ ವಿತರಣೆಯನ್ನು ಹಿಂದಿನಂತೆ ಜೆಸ್ಕಾಂ ಮೂಲಕವೇ ಮುಂದುವರಿಸಬೇಕು. ಟಾಟಾ ಪವರ್‌ಗೆ ವಿದ್ಯುತ್ ವಿತರಣೆಯ ಜವಾಬ್ದಾರಿ ನೀಡಬಾರದು ಹಾಗೂ ವಿದ್ಯುತ್ ಖಾಸಗೀಕರಣ ಪ್ರಸ್ತಾಪವನ್ನು ಕೈಬಿಡಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳ ನಿವೇಶನ ರಹಿತ ಬಡ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ನಿವೇಶನ ಮಂಜೂರು ಮಾಡಬೇಕು.
ಹಲವು ವರ್ಷಗಳಿಂದ ಸರ್ಕಾರಿ ಜಾಗ ಹಾಗೂ ಆಶ್ರಯ ಕಾಲೋನಿಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡಿ, ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ದೇವದುರ್ಗ, ಸಿಂಧನೂರು, ಮಸ್ಕಿ, ಲಿಂಗಸೂಗೂರು ಹಾಗೂ ರಾಯಚೂರು ತಾಲ್ಲೂಕುಗಳ ವಿವಿಧ ಗ್ರಾಮಗಳಲ್ಲಿನ ಸ್ಮಶಾನ ರಸ್ತೆಗಳ ಅಭಿವೃದ್ಧಿ, ಒತ್ತುವರಿ ತೆರವು, ಬಂಡಿದಾರಿ ತೆರವು, ಹೈಟೆಕ್ ಶೌಚಾಲಯ ನಿರ್ಮಾಣ, ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವುದು, ಜಿಪಿಎಸ್ ತಾಂತ್ರಿಕ ಸಮಸ್ಯೆ ಪರಿಹರಿಸುವುದು, ಕಾರ್ಮಿಕರಿಗೆ ಪೂರ್ಣ ಕೂಲಿ ಪಾವತಿಸುವುದು ಹಾಗೂ ಬಿಸಿಲಿನ ತಾಪದಿಂದ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕೃಷಿ ಕೂಲಿಕಾರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಚಂದ್ರಪ್ಪ, ಪ್ರಮುಖರಾದ ಬಸವಂತ್ರಾಯಗೌಡ, ನರಸಣ್ಣನಾಯಕ, ಚನ್ನಪ್ಪ ಆನೆಗುಂದಿ, ಕೆ.ಜಿ. ವೀರೇಶ, ಕರಿಯಪ್ಪ , ರಂಗನಗೌಡ, ದೇವೇಂದ್ರ ಗೌಡ, ಹೆಚ್. ಪದ್ಮಾ, ಪೆಂಚಲಯ್ಯ, ರಂಗಪ್ಪ ಯಾಪಲದಿನ್ನಿ ಸೇರಿದಂತೆ ರೈತರು, ಕೃಷಿ ಕೂಲಿಕಾರರು ಇದ್ದರು.