ರಾಯಚೂರಿನ ಜಿಡಳಿತ ಭವನದಲ್ಲಿ ಎಡಿಸಿ ಶಿವಾನಂದ ಭಜಂತ್ರಿಗೆ ನಮ್ಮ ಕರ್ನಾಟಕ ಸೇನೆ ಅರಕೇರಾ ತಾಲೂಕು ಘಟಕ ಶನಿವಾರ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮನಗೌಡ ಇದ್ದರು.
- ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರ ಆಗ್ರಹ
- ಅರಕೇರಾ ಎಡಿಸಿ ಶಿವಾನಂದ ಭಜಂತ್ರಿಗೆ ಮನವಿ
ಅರಕೇರಾ: ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯನ್ನು ಸರ್ಕಾರ ತ್ವರಿತವಾಗಿ ಪೂರ್ಣಗೊಳಿಸಿ ಅಂತಿಮ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ರಾಯಚೂರಿನಲ್ಲಿ ಎಡಿಸಿ ಶಿವಾನಂದ ಭಜಂತ್ರಿಗೆ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ನಾಯಕ ಮಾತನಾಡಿ, ಅರಕೇರಾ ಗ್ರಾಪಂಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು 2019ರ ಸೆ.17ರಂದು ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಬಳಿಕ ಜಿಲ್ಲಾಧಿಕಾರಿ, 2019ರ ಅ.17ರಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದು, 2020ರ ನ.25ರಂದು ಪರಿಷ್ಕೃತ ಪ್ರಸ್ತಾವನೆಯನ್ನೂ ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸಿದ್ದರು. ಆದರೆ, ಈವರೆಗೂ ಅಂತಿಮ ಆದೇಶ ಬಂದಿಲ್ಲ. ಇದರಿಂದ ಅರಕೇರಾ ಪಟ್ಟಣದ ಅಭಿವೃದ್ಧಿ ಕಾರ್ಯಗಳು ಹಾಗೂ ಆಡಳಿತಾತ್ಮಕ ನಿರ್ಧಾರಗಳಲ್ಲಿ ವಿಳಂಬ ಉಂಟಾಗುತ್ತಿದ್ದು, ಸಾರ್ವಜನಿಕರಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ ಎಂದರು.
ಸರ್ಕಾರ ಶೀಘ್ರದಲ್ಲೇ ಪಟ್ಟಣ ಪಂಚಾಯಿತಿ ರಚನೆಗೆ ಅನುಮೋದನೆ ನೀಡಬೇಕು. ಅಲ್ಲಿಯವರೆಗೆ ಗ್ರಾಪಂ ಚುನಾವಣೆ ನಡೆಸುವ ಪ್ರಕ್ರಿಯೆ ಮುಂದೂಡಬೇಕು. ಸರ್ಕಾರ ಸಕಾಲದಲ್ಲಿ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳದಿದ್ದರೆ ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ನ್ಯಾಯಾಲಯದ ಮೊರೆ ಹೋಗಲಾಗುವುದು. ಜತೆಗೆ ಅಗತ್ಯವಿದ್ದರೆ ಗ್ರಾಪಂ ಚುನಾವಣೆಗೆ ಸಂಬಂಧಿಸಿದ ಕ್ರಮಗಳ ವಿರುದ್ಧವೂ ಕಾನೂನು ಹೋರಾಟ ನಡೆಸಲಾಗುವುದು ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮನಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಹನುಮೇಶ ನಾಯಕ ಇತರರಿದ್ದರು.