ನರೇಗಾ ಕೆಲಸದ ವೇಳೆ ಮೃತಪಟ್ಟಿದ್ದ ಕೂಲಿ ಕಾರ್ಮಿಕನ ಕುಟುಂಬಸ್ಥರಿಗೆ ಪರಿಹಾರ ನೀಡಲು ವಿಳಂಬ ಮಾಡಿದ್ದಕ್ಕಾಗಿ ನ್ಯಾಯಾಲಯದ ಆದೇಶದನ್ವಯ ಕೆ.ಬಸಾಪುರ ಗ್ರಾಪಂಯ ಉಪಕರಣಗಳನ್ನು ಜಪ್ತಿ ಮಾಡಲಾಯಿತು. ನ್ಯಾಯಾಲಯದ ಬೇಲಿಪ್ ಅಮರೇಗೌಡ, ವಕೀಲ ಹುಸೇನ್‌ಬಾಷಾ, ಮೃತನ ಪತ್ನಿ ರೇಖಾ ಇದ್ದರು. 
ರಾಯಚೂರು

ಪರಿಹಾರ ವಿಳಂಬ ಗ್ರಾಪಂ ಉಪಕರಣಗಳ ಜಪ್ತಿ

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಶ್ರೇಣಿ ನ್ಯಾಯಾಲಯ ಆದೇಶ
  • ಸಿಂಧನೂರು ಕೆ.ಬಸಾಪುರ ಗ್ರಾಪಂ ಮಣ್ಣು ಕುಸಿತ
ಸಿಂಧನೂರು: ನರೇಗಾ ಕೆಲಸದಲ್ಲಿ ತೊಡಗಿದ್ದಾಗ ಮಣ್ಣು ಕುಸಿದು ಮೃತಪಟ್ಟಿದ್ದ ಕುಟುಂಬಸ್ಥರಿಗೆ ಪರಿಹಾರ ನೀಡಲು ವಿಳಂಬವಾದ ಹಿನ್ನೆಲೆಯಲ್ಲಿ ಕೆ.ಬಸಾಪುರ ಗ್ರಾಪಂಯಲ್ಲಿನ ಉಪಕರಣಗಳನ್ನು ಕೋರ್ಟ್ ಆದೇಶದಂತೆ ಜಪ್ತಿ ಮಾಡಲಾಯಿತು.
ಕೆ.ಬಸಾಪುರ ಗ್ರಾಪಂಯಿಂದ 2019ರ ಏ.25ರಂದು ಗುಂಡ ಗ್ರಾಪಂ ವ್ಯಾಪ್ತಿಯ ಗುಡಿಹಾಳದಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿದ್ದ ಹೊಸ ಕೆರೆ ಕಾಮಗಾರಿ ವೇಳೆ ಕೂಲಿ ಕಾರ್ಮಿಕ ಶಶಿಧರ ಎಂಬುವವರ ಮೇಲೆ ಮಣ್ಣು ಕುಸಿದು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದರು. ಇದರಿಂದ ಪರಿಹಾರ ಕೋರಿ ಮೃತ ಶಶಿಧರ ಪತ್ನಿ ರೇಖಾ ಅವರು ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ವಾದ-ವಿವಾದ ಆಲಿಸಿ ಅರ್ಜಿದಾರರಿಗೆ ಪರಿಹಾರ ಮೊತ್ತ ನೀಡಲು ಕಳೆದ 2025,ಆ.6ರಂದು ಆದೇಶ ನೀಡಿತ್ತು. ಆದರೆ, ಕೆ.ಬಸಾಪುರ ಗ್ರಾಪಂ ನ್ಯಾಯಾಲಯದ ಆದೇಶ ಪಾಲಿಸಿಲ್ಲ.
ಆಗ ರೇಖಾ ಶಶಿಧರ ಅವರು ಪುನಃ ನ್ಯಾಯಾಲಯದ ಡಿಕ್ರಿ ಆದೇಶ ಜಾರಿಗೆ ಕೋರಿ ಒಟ್ಟು ಪರಿಹಾರದ ಮೊತ್ತ 22,86,499 ರೂ. ಪಾವತಿಸಲು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಜುಲೈ 14 ರಂದು ಕೆ.ಬಸಾಪುರ ಗ್ರಾಪಂ ವಿರುದ್ಧ ಜಪ್ತಿ ಆದೇಶ ಹೊರಡಿಸಿತು. ಇದರನ್ವಯ ನ್ಯಾಯಾಲಯದ ಬೇಲಿಪ್ ಅಮರೇಗೌಡ, ವಕೀಲರಾದ ಎನ್.ರಾಮನಗೌಡ ಮತ್ತು ಹುಸೇನ್‌ಬಾಷಾ ಹಾಗೂ ಕೆ.ಬಸಾಪುರ ಗ್ರಾಪಂ ಸಿಬ್ಬಂದಿ ಸಮಕ್ಷಮದಲ್ಲಿ ಕಂಪ್ಯೂಟರ್, ಟೇಬಲ್, ಬ್ಯಾಟರಿ, ತಿಜೋರಿ ಹಾಗೂ ಕುರ್ಚಿಗಳು ಸೇರಿದಂತೆ ವಿವಿಧ ವಸ್ತುಗಳನ್ನು ಜಪ್ತಿ ಮಾಡಲಾಯಿತು.